HEALTH TIPS

ವೆರಿಕೋಸ್; ಉಬ್ಬಿದ ರಕ್ತನಾಳಗಳು:ತಿಳಿದಿರಬೇಕಾದ ವಿಷಯಗಳು

 ಜೀವವಿಕಾಸದ ಆದ್ಯತೆಯಲ್ಲಿ ಯಾವುದೋ ಸ್ಥಾನದಲ್ಲಿದ್ದ ಮನುಷ್ಯಪ್ರಾಣಿ ಉತ್ತುಂಗಕ್ಕೆ ಏರಿದ್ದು ಹಲವಾರು ಬದಲಾವಣೆಗಳ ದೆಸೆಯಿಂದ. ಇಂತಹ ಒಂದು ಬದಲಾವಣೆ ಎರಡು ಕಾಲುಗಳ ಮೇಲೆ ಬಹುಕಾಲ ನಿಲ್ಲಬಲ್ಲ ವೈಶಿಷ್ಟ್ಯ. ಚತುಷ್ಪಾದಿಗಳಿಗೆ ಹೋಲಿಸಿದರೆ ಈ ಸಾಮರ್ಥ್ಯ ಎರಡು ಕೈಗಳನ್ನು ಮುಕ್ತವಾಗಿ ಬಳಸಲು ಅವಕಾಶ ನೀಡಿತು.

ಜೀವವಿಕಾಸ ಸಾಗುತ್ತಾ ಹೋದಂತೆ ಈ ಕರ-ಕೌಶಲ ಮನುಷ್ಯಜೀವಿಯ ಏಳಿಗೆಗೆ ಕಾರಣವಾಯಿತು. ಆದರೆ ಕಾಲುಗಳ ಮೇಲೆ ನೇರವಾಗಿ ನಿಲ್ಲುವ ಸಾಮರ್ಥ್ಯಕ್ಕಾಗಿ ಹಲವಾರು ಸಮಸ್ಯೆಗಳನ್ನು ದೇಹ ಎದುರಿಸಬೇಕಿದೆ. ಬೆನ್ನುನೋವು, ಮಂಡಿ-ಸವೆತ, ಹರ್ನಿಯಾ, ಮೂಲವ್ಯಾಧಿ, ತಲೆಸುತ್ತಿ ಬೀಳುವಿಕೆ ಮೊದಲಾದುವುಗಳ ಕಾರಣ ನಾವು ದ್ವಿಪಾದಿಗಳಾಗಿ ಬದಲಾದದ್ದೇ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಕಾಲುಗಳಲ್ಲಿ ಉಬ್ಬುವ ರಕ್ತನಾಳಗಳು. ಇದನ್ನೇ 'ವೆರಿಕೋಸ್ (ಲ್ಯಾಟಿನ್ ಭಾಷೆಯಲ್ಲಿ ಉಬ್ಬಿದ, ಸೊಟ್ಟಗಾದ) ರಕ್ತನಾಳಗಳು' ಎನ್ನುತ್ತಾರೆ.

ಇಡೀ ಶರೀರದ ರಕ್ತಪರಿಚಲನೆಯನ್ನು ನಿರ್ವಹಿಸುವುದು ಹೃದಯ. ಇದು ಶರೀರದ ಮೇಲ್ಭಾಗದಲ್ಲಿ, ಎದೆಯ ಗೂಡಿನಲ್ಲಿದೆ. ನಮ್ಮ ನೆತ್ತಿಯ ತುದಿ ಮತ್ತು ಸೊಂಟದ ಭಾಗಕ್ಕೆ ಸರಿಸುಮಾರು ನಡುಭಾಗದಲ್ಲಿ ಹೃದಯ ಬರುತ್ತದೆ. ಚತುಷ್ಪಾದಿಗಳ ದೇಹಕ್ಕೆ ಈ ಸ್ಥಾನ ಬಹಳ ಅನುಕೂಲಕಾರಿ. ಆದರೆ, ದ್ವಿಪಾದಿ ಮಾನವನಲ್ಲಿ ಕಾಲಿನ ಉದ್ದವೂ ಸೇರಿ, ಈ ಲೆಕ್ಕಾಚಾರ ಏರುಪೇರಾಗಿದೆ. ಗುರುತ್ವಕ್ಕೆ ವಿರುದ್ಧವಾಗಿ ಹರಿಯಬೇಕಾದ ಆವಶ್ಯಕತೆ ಶರೀರದ ಕೆಳಭಾಗದ ರಕ್ತನಾಳಗಳದ್ದು. ಇದು ಸುಲಭದ ಮಾತಲ್ಲ. ನಾವು ಚಲಿಸುವಾಗ ಕಾಲುಗಳ ಬಲಿಷ್ಠ ಮಾಂಸಖಂಡಗಳು ಸತತವಾಗಿ ಸಂಕೋಚನ-ವಿಕಸನಗೊಳ್ಳುತ್ತಾ ರಕ್ತನಾಳಗಳನ್ನು ಒತ್ತುತ್ತವೆ. ಜೊತೆಗೆ, ಈ ರಕ್ತನಾಳಗಳಲ್ಲಿ ಮುಂದೆ ಹರಿದ ರಕ್ತ ಮತ್ತೆ ಹಿಂದೆ ಹರಿಯದಂತೆ ತಡೆಯುವ ಏಕಮುಖ ಕವಾಟಗಳಿವೆ. ಈ ಮೂಲಕ ರಕ್ತ ಸರಾಗವಾಗಿ ಮೇಲೆ ಮೇಲೆ ಹರಿಯುತ್ತಾ ಹೃದಯವನ್ನು ಸೇರುತ್ತದೆ. ಇದು ಜೀವನದುದ್ದಕ್ಕೂ ಸಾಗುತ್ತಲೇ ಇರಬೇಕಾದ ನಿರಂತರ ಪ್ರಕ್ರಿಯೆ.

ಕಾಲಿನ ಮಾಂಸಖಂಡಗಳಿಗೆ ಸರಿಯಾದ ಕೆಲಸ ನೀಡದಿದ್ದರೆ ರಕ್ತಸಂಚಾರ ಅಸಮಂಜಸವಾಗುತ್ತದೆ. ಒಂದೆಡೆ ಕುಳಿತು ಕೆಲಸ ಮಾಡುವ ವೃತ್ತಿ; ಹೆಚ್ಚು ಕಾಲ ನಿಂತು ಕೆಲಸ ಮಾಡಬೇಕಾದ ನೌಕರಿ; ವ್ಯಾಯಾಮ ಇಲ್ಲದ ಜೀವನಶೈಲಿ; ಬೊಜ್ಜು, ಧೂಮಪಾನ, ಅಪಘಾತ ಮೊದಲಾದ ಸಂದರ್ಭಗಳಲ್ಲಿ ಬಹಳ ಕಾಲ ಚಲನೆಯಿಲ್ಲದ ಸ್ಥಿತಿ ಮೊದಲಾದ ಸಂದರ್ಭಗಳು ಇದಕ್ಕೆ ಉದಾಹರಣೆ. ಆಗ ಕಾಲುಗಳ ರಕ್ತವು ಮೇಲೆ ಹರಿಯಲಾಗದೇ ರಕ್ತನಾಳಗಳಲ್ಲೇ ಉಳಿದುಬಿಡುತ್ತದೆ. ಇದು ನಾಳಗಳ ಒಳಗಿನ ಏಕಮುಖ ಕವಾಟಗಳನ್ನು ಘಾಸಿ ಮಾಡುತ್ತದೆ. ಇದರಿಂದ ನಾಳಗಳ ಗೋಡೆಗಳು ಹಿಗ್ಗುತ್ತಾ, ಅದರ ರಚನೆಯನ್ನು ದುರ್ಬಲವಾಗಿಸುತ್ತದೆ. ಇಂತಹ ರಕ್ತನಾಳಗಳು ದಪ್ಪನಾಗಿ, ಸೊಟ್ಟಗಾಗಿ, ಚರ್ಮದ ಮೇಲೆ ಉಬ್ಬಿದಂತೆ ಕಾಣುತ್ತದೆ. ಇಂತಹವುಗಳನ್ನು 'ವೆರಿಕೋಸ್ ರಕ್ತನಾಳ' ಎನ್ನಬಹುದು. ಗರ್ಭಿಣಿಯರಲ್ಲಿ ಗರ್ಭಕೋಶದ ಒತ್ತಡದಿಂದ, ಹೃದಯದತ್ತ ಸಾಗುವ ದೊಡ್ಡ ಗಾತ್ರದ ಅಪಧಮನಿಗಳಲ್ಲಿನ ರಕ್ತಸಂಚಾರಕ್ಕೆ ತಡೆಯಾಗುತ್ತದೆ. ಇದರಿಂದ ದೊಡ್ಡ ಗಾತ್ರದ ಅಪಧಮನಿಗಳ ಸಂಪರ್ಕವಿರುವ ಕಾಲುಗಳ ರಕ್ತನಾಳಗಳಲ್ಲಿನ ರಕ್ತಸಂಚಾರವೂ ನಿಧಾನವಾಗುತ್ತದೆ. ಇದು ಕೂಡ ವೆರಿಕೋಸ್ ಸಮಸ್ಯೆ ಉಂಟುಮಾಡಬಹುದು.

ವೆರಿಕೋಸ್ ರಕ್ತನಾಳಗಳು ಚರ್ಮದ ಮೇಲೆ ಉಬ್ಬಿರುವ ನೀಲಿ, ನೇರಳೆಬಣ್ಣದ ಸೊಟ್ಟ ಗೆರೆಗಳಂತೆ, ಗಂಟುಗಳಂತೆ ವಿಕಾರವಾಗಿ ಎದ್ದುಕಾಣುತ್ತವೆ. ಇವುಗಳಿಗೆ ಪೆಟ್ಟಾದರೆ ಅಧಿಕ ರಕ್ತಸ್ರಾವ ಉಂಟಾಗಬಹುದು. ಕಾಲಿನ ಮಾಂಸಖಂಡಗಳ ನೋವು, ಜೋಮು ಹಿಡಿಯುವಿಕೆ, ಪಾದಗಳ ಊತ, ಚರ್ಮ ತೆಳುವಾಗಿ ಬೇಗನೆ ಗಾಯವಾಗುವುದು, ತುರಿಕೆ, ಶೀಘ್ರವಾಗಿ ಗುಣವಾಗದ ಹುಣ್ಣುಗಳು, ಕಾಲಿನ ಸ್ನಾಯು ಸೆಳೆತ, ಮೀನಖಂಡಗಳ ಬಿಗುವು, ಉರಿ, ಕಾಲಿನ ಚರ್ಮ ಕಪ್ಪುಗಟ್ಟುವಿಕೆ ಮೊದಲಾದ ಲಕ್ಷಣಗಳು ವೆರಿಕೋಸ್ ರಕ್ತನಾಳಗಳ ಸಮಸ್ಯೆಯ ಪರಿಣಾಮಗಳು. ಈ ರಕ್ತನಾಳಗಳಲ್ಲಿ ರಕ್ತಸಂಚಾರ ತಗ್ಗುವ ಕಾರಣ ಅಲ್ಲಿ ರಕ್ತ ಹೆಪ್ಪುಗಟ್ಟಿ, ಹೆಪ್ಪಿನ ಭಾಗ ಕಳಚಿಕೊಂಡು ನಿಧಾನವಾಗಿ ಏರುತ್ತಾ ಹೃದಯವನ್ನು ಸೇರಿ ಶ್ವಾಸಕೋಶಗಳನ್ನು ಹಾಳು ಮಾಡಬಹುದು. ಇದು ತೀವ್ರವಾದ ಸಮಸ್ಯೆ.

ನಿಯಮಿತ ವ್ಯಾಯಾಮ ವೆರಿಕೋಸ್ ಸಮಸ್ಯೆಯನ್ನು ತಡೆಯಬಲ್ಲ ಉತ್ತಮ ವಿಧಾನ. ಚುರುಕು ನಡಿಗೆ, ಈಜು, ಸೈಕಲ್ ಸವಾರಿ, ಯೋಗಾಸನಗಳು, ದೀರ್ಘಶ್ವಾಸ ಪ್ರಾಣಾಯಾಮ, ಒಳ್ಳೆಯ ಪ್ರೊಟೀನ್‌ಯುಕ್ತ ಆಹಾರ, ಸಾಕಷ್ಟು ನೀರಿನ ಸೇವನೆ ಮೊದಲಾದುವು ವೆರಿಕೋಸ್ ಸಮಸ್ಯೆ ಆಗದಂತೆ ತಡೆಯಬಲ್ಲವು. ಹೆಚ್ಚುಕಾಲ ಕುಳಿತು ಕೆಲಸ ಮಾಡಬೇಕಾದವರು ಆಗಾಗ ಎದ್ದು ಕೆಲವು ಹೆಜ್ಜೆ ನಡೆಯುವುದು ಸೂಕ್ತ. ಇದರ ಜೊತೆಗೆ ಗಂಟೆಗೆ ಒಂದು ಸಾರಿ ಕುರ್ಚಿಯನ್ನು ಬಿಟ್ಟು ಒಂದು ಸುತ್ತು ಓಡಾಡಿ ಬರುವುದು ಒಳ್ಳೆಯ ಪದ್ಧತಿ. ಅಂತೆಯೇ ಶರೀರ ತೂಕದ ನಿರ್ವಹಣೆ, ಧೂಮಪಾನ ಮಾಡದಿರುವಿಕೆ, ಚಲನೆ ಇಲ್ಲದಿರುವ ಪರಿಸ್ಥಿತಿಯಲ್ಲಿ ಕಾಲುಗಳ ಮಾಲೀಸು, ಅನುಭವಿ ಭೌತಚಿಕಿತ್ಸಕರಿಂದ ಮಾಡಿಸಿಕೊಳ್ಳುವ ಪರೋಕ್ಷ ವ್ಯಾಯಾಮ ಮೊದಲಾದ ಜೀವನಶೈಲಿಯ ಬದಲಾವಣೆಗಳು ಪ್ರಯೋಜನಕಾರಿ.

ವೆರಿಕೋಸ್ ರಕ್ತನಾಳಗಳನ್ನು ಭೌತಿಕ ತಪಾಸಣೆ ಮತ್ತು ಅಲ್ಟ್ರಾಸೌಂಡ್ ತರಂಗಗಳ ಪರೀಕ್ಷೆಗಳ ನೆರವಿನಿಂದ ಪತ್ತೆ ಮಾಡುತ್ತಾರೆ. ವೆರಿಕೋಸ್ ಸಮಸ್ಯೆಯಿಂದ ಈಗಾಗಲೇ ಆಗಿರುವ ವ್ರಣಗಳಂತಹ ಸಮಸ್ಯೆಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ರಕ್ತನಾಳಗಳ ಮೇಲೆ ಬಾಹ್ಯವಾಗಿ ಒತ್ತಡ ಹಾಕಿ, ಅವುಗಳಲ್ಲಿನ ಸಂಚಾರವನ್ನು ಪ್ರಚೋದಿಸುವ ಸ್ಟಾಕಿಂಗ್‌ಗಳನ್ನು ಬಳಸಬಹುದು. ತೀವ್ರವಾದ ಸಮಸ್ಯೆ ಇರುವಾಗ ಶಸ್ತ್ರಚಿಕಿತ್ಸೆ, ರಾಸಾಯನಿಕಗಳ ಚುಚ್ಚುಮದ್ದು, ವಿಶೇಷ ರೀತಿಯ ಅಂಟಿನ ಬಳಕೆ, ಲೇಸರ್ ಚಿಕಿತ್ಸೆ, ರೇಡಿಯೋತರಂಗಗಳ ಆನ್ವಯಿಕ ಚಿಕಿತ್ಸೆ ಲಭ್ಯವಿವೆ. ಇದರಲ್ಲಿ ಸೂಕ್ತವಾದದ್ದನ್ನು ತಜ್ಞರು ಸೂಚಿಸುತ್ತಾರೆ.

ವೆರಿಕೋಸ್ ರಕ್ತನಾಳಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ. ಆರಂಭಿಕ ಹಂತದಲ್ಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಅತ್ಯಂತ ಪರಿಣಾಮಕಾರಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries