ಭುವನೇಶ್ವರ: ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆ 2019 ಜಾರಿ ಸಂಬಂಧ ಅಧಿಸೂಚನೆ ಪ್ರಕಟಿಸಿದೆ. ಈ ನಿರ್ಧಾರವನ್ನು ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಸ್ವಾಗತಿಸಿದೆ. ಆದರೆ ರಾಜ್ಯದ ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಈ ಕ್ರಮವನ್ನು ಟೀಕಿಸಿವೆ.
'ಸಿಎಎ ಅನುಷ್ಠಾನವನ್ನು ಬಿಜೆಡಿ ಸ್ವಾಗತಿಸುತ್ತದೆ. ಏಕೆಂದರೆ ಅದು ಜನರಿಗೆ ಪೌರತ್ವವನ್ನು ನೀಡುತ್ತಿದೆ. ಜತೆಗೆ ದೇಶದಲ್ಲಿ ವಾಸಿಸುವ ಜನರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ' ಎಂದು ಬಿಜೆಡಿ ಶಾಸಕ ಪರಶುರಾಮ ಧಾಡಾ ಹೇಳಿದ್ದಾರೆ.
'ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತೀಯ ನಾಗರಿಕರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ, ಇದು ಕೇವಲ ವಿದೇಶಿಯರೊಂದಿಗೆ ವ್ಯವಹರಿಸುತ್ತದೆ. ಬಿಜು ಜನತಾ ದಳದ ಸಂಸದರು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ, ನಾವು ಎನ್‌ಆರ್‌ಸಿಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಾಂತಿ ನೆಲೆಸುವಂತೆ ಮತ್ತು ವದಂತಿಗಳನ್ನು ಹರಡದಂತೆ ನಮ್ಮ ನಾಗರಿಕರಿಗೆ ನಾನು ಮನವಿ ಮಾಡುತ್ತೇನೆ' ಎಂದು ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಹಿಂದೆ ಹೇಳಿದ್ದರು.
ಸಾರ್ವತ್ರಿಕ ಚುನಾವಣೆಗೆ ಮುನ್ನ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್, ಸಿಪಿಐ(ಎಂ) ಮತ್ತು ಸಮಾಜವಾದಿ ಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ನರಸಿಂಗ ಮಿಶ್ರಾ, ' ಸಿಎಎಯನ್ನು ದೇಶದ ಬಹುಪಾಲು ಜನ ವಿರೋಧಿಸುತ್ತಾರೆ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಕೇಂದ್ರ ಸರ್ಕಾರ ದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸುವ ಉದ್ದೇಶದಿಂದ ಹಾಗೂ ಸಮಾಜದ ನಿರ್ದಿಷ್ಟ ವರ್ಗದ ಮತಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಈ ಅಧಿಸೂಚನೆ ಹೊರಡಿಸಿದೆ' ಎಂದು ಆರೋಪಿಸಿದ್ದಾರೆ.
'ನಾವು ಸಿಎಎಯನ್ನು ಬಲವಾಗಿ ವಿರೋಧಿಸುತ್ತಿದ್ದೇವೆ. ಏಕೆಂದರೆ ಅದು ಧರ್ಮದ ಆಧಾರದ ಮೇಲೆ ಪೌರತ್ವವನ್ನು ನೀಡುವ ಸಾಧ್ಯತೆಯಿದೆ. ಇದು ತಾರತಮ್ಯವನ್ನು ಸೃಷ್ಟಿಸುವುದಲ್ಲದೆ ನಮ್ಮ ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಸಿಪಿಐ(ಎಂ) ನಾಯಕ ಸುರೇಶ್ ಪಾಣಿಗ್ರಾಹಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ -2019ಕ್ಕೆ (ಸಿಎಎ) ಸಂಬಂಧಿಸಿದ ನಿಯಮಗಳನ್ನು ಕೇಂದ್ರವು ಸೋಮವಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಈ ಮೂರು ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರವು ಇನ್ನು ಆರಂಭಿಸಲಿದೆ.