ಮುಂಬೈ: ಇತ್ತೀಚೆಗೆ ಮುಂಬೈನ ರೈಲು ನಿಲ್ದಾಣವೊಂದರಲ್ಲಿ ಕುಸಿದು ಬಿದ್ದು, ಮೃತಪಟ್ಟ 47 ವರ್ಷದ ವ್ಯಕ್ತಿಯೊಬ್ಬರಿಗೆ ಸೂಕ್ತ ಸಂದರ್ಭದಲ್ಲಿ ನೆರವಾಗದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಅಲ್ಲಾವುದ್ದೀನ್ ಮುಜಾಹಿದ್ ಎಂಬಾತ ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದರು.
ನಗರದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಜಾಹಿದ್, ಫೆಬ್ರುವರಿ 14ರಂದು ರೈಲಿನಲ್ಲಿ ಸೆವ್ರಿ ಇಂದ ಮುಂಬೈನ ರೇ ರೋಡ್ ನಿಲ್ದಾಣಕ್ಕೆ ಬಂದಿದ್ದರು. ನಿಲ್ದಾಣದಲ್ಲಿ ಇಳಿದ ನಂತರ ತೀವ್ರ ಬಳಲಿದ್ದ ಅವರು ಪ್ಲಾಟ್‌ಫಾರ್ಮ್‌ನಲ್ಲಿ ಕುಳಿತಿದ್ದರು. ನಂತರ ಕುಸಿದು ಬಿದ್ದಿದ್ದರು.
ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ, ಮುಜಾಹಿದ್ ಅವರನ್ನು ನೋಡಿದ್ದರು. ಮಾದಕ ವ್ಯಸನಿ ಇರಬಹುದೆಂದು ಭಾವಿಸಿ ಲೋಕಲ್ ರೈಲಿನ ಲಗೇಜ್ ಇರಿಸುವ ಬೋಗಿಯಲ್ಲಿ ಅವರನ್ನು ಕೂರಿಸಿದ್ದರು. ಈ ದೃಶ್ಯಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಆದರೆ, ಆತ ಮೃತಪಟ್ಟಿರುವುದು ಮರುದಿನ ಗೊರೆಗಾಂವ್ ನಿಲ್ದಾಣದಲ್ಲಿ ಬೆಳಕಿಗೆ ಬಂದಿತ್ತು.
ಆರಂಭದಲ್ಲಿ ಈ ಸಂಬಂಧ ಬೊರಿವಾಲಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ವರದಿ (ಎಡಿಆರ್) ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಆದರೆ, ಗೊರೆಗಾಂವ್ ನಿಲ್ದಾಣದಿಂದ ಶಿವಾಜಿ ಮಹಾರಾಜ್ ಟರ್ಮಿನಲ್ ವರೆಗಿನ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ವ್ಯಕ್ತಿಯು ರೇ ರೋಡ್ ನಿಲ್ದಾಣದಲ್ಲಿ ಕುಸಿದು ಬಿದ್ದ ದೃಶ್ಯ ಕಂಡುಬಂದಿತ್ತು.
ವ್ಯಕ್ತಿಗೆ ಸೂಕ್ತ ನೆರವು ನೀಡದೆ, ಲಗೇಜ್ ಬೋಗಿಯಲ್ಲಿ ಇರಿಸಿದ ಆರೋಪದ ಮೇಲೆ ರೈಲ್ವೆ ಪೊಲೀಸ್ ಕಾನ್‌ಸ್ಟೆಬಲ್ ವಿಜಯ್ ಖಂಡೇಕರ್ ಮತ್ತು ಮಹಾರಾಷ್ಟ್ರ ಭದ್ರತಾ ಪಡೆಯ ಮಹೇಶ್ ಅಂದಲೆ ಎಂಬವರನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಕರ್ತವ್ಯಲೋಪ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಯ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಅವರು ಪತ್ನಿ ಹಾಗೂ 19 ವರ್ಷದ ಮಗನನ್ನು ಅಗಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.