ವಾಷಿಂಗ್ಟನ್: 'ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವಗಳಾದ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧವು ಕಳೆದ 20 ವರ್ಷಗಳಲ್ಲಿ ಗುರುತರವಾಗಿ ಅಭಿವೃದ್ಧಿ ಹೊಂದಿದೆ. ಈಗ ಉಭಯ ದೇಶಗಳ ಸಂಬಂಧವು ನಾವು ಅಂದುಕೊಂಡಷ್ಟು ಮಹತ್ವಾಕಾಂಕ್ಷಿಯೂ ಆಗಬಹುದು' ಎಂದು ಅಮೆರಿಕದಲ್ಲಿನ ಭಾರತೀಯ ಉಪ ರಾಯಭಾರಿ ಶ್ರೀಪ್ರಿಯಾ ರಂಗನಾಥನ್ ಅವರು ಹೇಳಿದರು.
ಮೋಟ್ವಾನಿ ಜಡೇಜಾ ಫೌಂಡೇಷನ್ ಸಹಯೋಗದಲ್ಲಿ ಸ್ಟಾಮ್‌ಫೋರ್ಡ್ ಇಂಡಿಯಾ ಪಾಲಿಸಿ ಮತ್ತು ಎಕನಾಮಿಕ್ಸ್ ಕ್ಲಬ್ (ಎಸ್‌ಐಪಿಇಸಿ) ಆಯೋಜಿಸಿದ್ದ 'ಸ್ಟಾನ್‌ಫೋರ್ಡ್ ಇಂಡಿಯಾ ಡೈಲಾಗ್, ದಿ ಲೀಡರ್ಸ್ ಆಫ್ ಟುಮಾರೊ ಕಾನ್ಫರೆನ್ಸ್'ನಲ್ಲಿ ಅವರು ಹೀಗೆ ಹೇಳಿದರು.
'ಕಳೆದ 70 ವರ್ಷಗಳಲ್ಲಿ ಭಾರತ- ಅಮೆರಿಕ ನಡುವಣ ಸಂಬಂಧ ಸಾಕಷ್ಟು ವೃದ್ಧಿಯಾಗಿದೆ. ಕಳೆದ 20 ವರ್ಷಗಳಲ್ಲಿ ಅದು ಬೇರೆಯದ್ದೇ ಹಂತ ತಲುಪಿದೆ. ಈ ಜಗತ್ತಿನ ರೂಪುರೇಷೆಯನ್ನು ತಿದ್ದುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳುವ ಸ್ಥಾನದಲ್ಲಿ ಈಗ ಉಭಯ ದೇಶಗಳಿವೆ. ಇನ್ನೂ 10 ವರ್ಷಗಳ ನಂತರ ಹಿಂದಿರುಗಿ ನೋಡಿದಾಗ ಕನಿಷ್ಠಪಕ್ಷ 10ರಿಂದ 15 ಮಹತ್ವದ ಯೋಜನೆಗಳಲ್ಲಿ ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಲಿವೆ' ಎಂದರು.