ಕೀವ್: ಉಕ್ರೇನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ ವ್ಯಾಪಕ ದಾಳಿ ಪ್ರಾರಂಭಿಸಿದೆ. ಇದು ಉಭಯ ದೇಶಗಳ ನಡುವಿನ ಕದನವು ಮತ್ತಷ್ಟು ಉಲ್ಬಣಿಸುವ ಸೂಚನೆಯನ್ನು ನೀಡಿದೆ.
ರಷ್ಯಾ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಪುನರಾಯ್ಕೆಯಾದ ಮರು ದಿನವೇ ಉಕ್ರೇನ್ ಮೇಲೆ ರಷ್ಯಾ ಸೇನೆ ಶುಕ್ರವಾರ ಅತ್ಯಂತ ವಿನಾಶಕಾರಿ ದಾಳಿಯನ್ನು ನಡೆಸಿದೆ.
ವಿದ್ಯುತ್ ಸ್ಥಾವರಗಳು ಕ್ಷಿಪಣಿ ದಾಳಿಗೆ ತುತ್ತಾಗಿರುವುದರಿಂದ ಉಕ್ರೇನ್‌ನ ಹಲವಾರು ನಗರಗಳು ಕತ್ತಲೆಯಲ್ಲಿ ಮುಳುಗಿವೆ. ದಾಳಿಯಲ್ಲಿ ಐದು ಜನರು ಹತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ನಿಪ್ರೊದಲ್ಲಿರುವ ದೇಶದ ಅತಿದೊಡ್ಡ ಜಲವಿದ್ಯುತ್ ಸ್ಥಾವರಕ್ಕೆ ತೀವ್ರ ಹಾನಿಯಾಗಿದೆ. ಇದರಿಂದದಾಗಿ, ಯುದ್ಧದ ಆರಂಭದಿಂದಲೂ ಅಸುರಕ್ಷತೆಯಲ್ಲಿರುವ ಝಪೊರಿಝಿಯಾ ಅಣು ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಸಂಪರ್ಕದಲ್ಲೂ ಸಮಸ್ಯೆ ಎದುರಾಗಿದೆ.
ಶುಕ್ರವಾರ ನಡೆಸಿದ ದಾಳಿಗೆ ರಷ್ಯಾ 60ಕ್ಕೂ ಹೆಚ್ಚು ಸ್ಫೋಟಕ ಡ್ರೋನ್ ಮತ್ತು 90 ಕ್ಷಿಪಣಿಗಳನ್ನು ಬಳಸಿದೆ. 2022ರಿಂದ ನಡೆಸುತ್ತಿರುವ ಪೂರ್ಣ ಪ್ರಮಾಣದ ಆಕ್ರಮಣದಲ್ಲಿ ಇಂಧನ ಮೂಲಸೌಕರ್ಯಗಳ ಮೇಲೆ ಇಷ್ಟೊಂದು ಭೀಕರ ದಾಳಿ ನಡೆಸಿರುವುದು ಇದೇ ಮೊದಲು ಎನಿಸುತ್ತದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ರಾಜಧಾನಿ ಕೀವ್ ಮೇಲೆ ಸುಮಾರು 31 ಕ್ಷಿಪಣಿಗಳನ್ನು ರಷ್ಯಾ ಸೇನೆ ಉಡಾಯಿಸಿದೆ. ಅಲ್ಲದೆ, ದೇಶದ ಎರಡನೇ ಅತ್ಯಂತ ದೊಡ್ಡ ನಗರ ಹಾರ್ಕಿವ್‌ನಲ್ಲಿ ಈ ದಾಳಿಯಿಂದ ಭಾರಿ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರದ ದಾಳಿಯನ್ನು 'ಪ್ರತೀಕಾರದ ದಾಳಿ' ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಹೇಳಿಕೊಂಡಿದೆ. ಉಕ್ರೇನ್ ತನ್ನ ಈಶಾನ್ಯ ಗಡಿಯಲ್ಲಿ ರಷ್ಯಾದ ಬೆಲ್ಗೊರೊಡ್ ಪ್ರದೇಶದ ಮೇಲೆ ಶೆಲ್ ದಾಳಿ ತೀವ್ರಗೊಳಿಸಿದೆ. ರಷ್ಯಾದ ತೈಲ ಸಂಸ್ಕರಣಾಗಾರಗಳು ಮತ್ತು ಇತರ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಗಳನ್ನು ಉಕ್ರೇನ್ ನಡೆಸಿತ್ತು.