ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಬಾಯಿಯ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು ಈ ದಿನ ಆಚರಿಸಲಾಗುವುದು. ದೇಹದ ಆರೋಗ್ಯ ಕಾಪಾಡಲು ಬಾಯಿ ಸ್ವಚ್ಛತೆ ಕೂಡ ತುಂಬಾನೇ ಮುಖ್ಯ.
ದಂತದ ಸಮಸ್ಯೆ ಮಕ್ಕಳಲ್ಲಿ ಕಂಡು ಬರುವುದು, ಚಿಕ್ಕ ಪ್ರಾಯದಲ್ಲಿ ಹುಳುಕು ಹಲ್ಲು ಉಂಟಾಗುವುದು, ಈ ಹುಳುಕು ಹಲ್ಲು ತಡೆಗಟ್ಟಲು ಏನು ಮಾಡಬೇಕು ಎಂದು ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮಕ್ಕಳ ದಂತ ವೈದ್ಯೆ ಡಾ. ಪ್ರಭಾವತಿ ಹೆಚ್.ಬಿ. ಸಮಗ್ರ ಮಾಹಿತಿಯನ್ನು ನೀಡಿದ್ದಾರೆ ನೋಡಿ:
ಮಕ್ಕಳ ದಂತದ ಆರೋಗ್ಯ
ಶಿಶುವಿನ ಹಂತದಲ್ಲೇ ಬಾಯಿಯ ಆರೋಗ್ಯ ಕಾಳಜಿ ಮುಖ್ಯ. ಉತ್ತಮ ಅಭ್ಯಾಸಗಳನ್ನು ಈ ಹಂತದಿಂದಲೇ ಆರಂಭಿಸುವುದರಿಂದ ಮಕ್ಕಳ ಹಲ್ಲು ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ಶಿಶುವಿನ ಬಾಯಿ ಆರೋಗ್ಯ ಏಕೆ ಮುಖ್ಯ?
ಮಕ್ಕಳ ಬೆಳವಣಿಗೆಯ ಹಂತದಲ್ಲಿ ಬಾಯಿಯ ಆರೋಗ್ಯ ತುಂಬಾನೆ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಮಗುವಿನ ಒಟ್ಟಾರೆ ಯೋಗಕ್ಷೇಮಕ್ಕೆ ಇದು ಪ್ರಮುಖವಾದುದು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಬಾಯಿ ಸ್ವಚ್ಛತೆಯ ಅಭ್ಯಾಸಗಳನ್ನು ಮಾಡದಿದ್ದಲ್ಲಿ ಹಲ್ಲು ಹುಳುಕು ಕಾಣಿಸಿಕೊಳ್ಳಬಹುದು. ತದನಂತರ ಹಲ್ಲು ನೋವು, ಸೋಂಕುಗಳು ಕಾಣಿಸಿಕೊಂಡು ಮಗುವಿನ ಆರೋಗ್ಯಯುತ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಶಿಶುಗಳಲ್ಲಿ ಹಲ್ಲು ಹುಳುಕಾಗಲು ಕಾರಣಗಳು:
- ಆಗ್ಗಾಗ್ಗೆ ಸಕ್ಕರೆಯುತ ಆಹಾರಗಳು ಮತ್ತು ಪಾನೀಯಗಳ ಸೇವನೆ
- ದೀರ್ಘಕಾಲದ ಹಾಲಿನ ಬಾಟಲಿಗಳ ಬಳಕೆಯಿಂದಲೂ ಹಲ್ಲು ಹುಳುಕಾಗುವ ಸಾಧ್ಯತೆ ಇರುತ್ತದೆ.
- ವಿಶೇಷವಾಗಿ ಶಿಶುವಿನಲ್ಲಿ ಪ್ರಾಥಮಿಕ ಹಲ್ಲು ಕಾಣಿಸಿಕೊಂಡ ನಂತರ ರಾತ್ರಿ ಹೊತ್ತು ಹಾಲುಣಿಸುವುದರಿಂದಲೂ ಶಿಶುಗಳಲ್ಲಿ ಹಲ್ಲು ಹುಳುಕು ಕಾಣಿಸಿಕೊಳ್ಳಬಹುದು.
ಶಿಶುಗಳಲ್ಲಿ ಹಲ್ಲು ಹುಳುಕು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳು
ಪೋಷಕರು ಶಿಶುಗಳಲ್ಲಿ ಹಲ್ಲು ಹುಳುಕಾಗುವುದನ್ನು ತಡೆಗಟ್ಟಲು ಬಾಯಿಯ ಸ್ವಚ್ಛತೆಗೆ ಉತ್ತಮ ಅಭ್ಯಾಸಗಳನ್ನು ಮಾಡಬೇಕು. ಶಿಶುವಿನ ಹಲ್ಲುಗಳನ್ನು ದಿನಕ್ಕೆ ಎರಡು ಬಾರಿ ಮೃದುವಾದ ಬ್ರಷ್ ಬಳಸಿ ಸ್ವಚ್ಛಗೊಳಿಸಬೇಕು. ಸಕ್ಕರೆಯುತ ಆಹಾರ ಮತ್ತು ಪಾನೀಯ ಸೇವನೆಯನ್ನು ಮಿತಿಗೊಳಿಸಬೇಕು. ದೀರ್ಘಕಾಲದ ಹಾಲಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಬೇಕು.ವಿಶೇಷವಾಗಿ ಶಿಶುವಿನಲ್ಲಿ ಪ್ರಾಥಮಿಕ ಹಲ್ಲು ಕಾಣಿಸಿಕೊಂಡ ನಂತರ ಹೆಚ್ಚು ಜಾಗ್ರತೆವಹಿಸಬೇಕು.
ಶಿಶುವಿನಲ್ಲಿ ಹಲ್ಲು ಹುಳುಕು ಕಂಡುಬಂದರೆ ಪರಿಹಾರವೇನು?
ಶಿಶುವಿನಲ್ಲಿ ಹಲ್ಲು ಹುಳುಕು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ತೆಗೆದುಕೊಳ್ಳುವುದು ಒಳಿತು. ವೈದ್ಯರ ಸಲಹೆಯಂತೆ
ಫ್ಲೋರೈಡ್ ವಾರ್ನಿಷ್ ಬಳಕೆ, ಆಹಾರ ಪದ್ಧತಿ ಮತ್ತು ಮೌಖಿಕ ನೈರ್ಮಲ್ಯದ ಅಭ್ಯಾಸಗಳಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದಲೂ ಹುಳುಕು ಹಲ್ಲಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಶಿಶುವಿನ ಹಲ್ಲಿನ ಆರೈಕೆಗೆ ಸಲಹೆಗಳು:
- ಶಿಶುವಿನ ಪ್ರಾಥಮಿಕ ಹಲ್ಲು ಉದುರಿದ ತಕ್ಷಣ ಬಾಯಿಯ ಸ್ವಚ್ಛತೆಗೆ ಉತ್ತಮ ಅಭ್ಯಾಸಗಳನ್ನು ಪ್ರಾರಂಭಿಸಿ. ಮೃದುವಾದ ಬ್ರಷ್ ಅನ್ನು ಬಳಸಿ ದಿನಕ್ಕೆ ಎರಡು ಬಾರಿ ಶಿಶುವಿನ ಹಲ್ಲುಗಳನ್ನು ಸ್ವಚ್ಛಗೊಳಿಸಿ.
- 6 ರಿಂದ 12 ತಿಂಗಳ ನಡುವಿನ ಶಿಶುವಿಗೆ ಘನ ಆಹಾರವನ್ನು ಅಭ್ಯಾಸ ಮಾಡಿ.
- ಶಿಶುವಿನಲ್ಲಿ ಪ್ರಾಥಮಿಕ ಹಲ್ಲು ಕಾಣಿಸಿಕೊಂಡ ನಂತರ ರಾತ್ರಿ ಸಮಯ ಹಾಲುಣಿಸುವಿಕೆಯನ್ನು ಸ್ಥಗಿತಗೊಳಿಸಿ.
- ಹೆಚ್ಚಿನ ಸಮಯ ಹಾಲಿನ ಬಾಟಲ್ ಬಳಕೆಯನ್ನು ಮಿತಿಗೊಳಿಸಿ. 12 ರಿಂದ 14 ತಿಂಗಳ ಮಗುವಿಗೆ ಕಪ್‌ನಲ್ಲಿ ಹಾಲು ಕುಡಿಯಲು ಅಭ್ಯಸಿಸಿ.
- ಮಕ್ಕಳಿಗೆ ಹಣ್ಣಿನ ರಸದ ಬದಲಾಗಿ ನೇರವಾಗಿ ಕತ್ತರಿಸಿದ/ಸುಲಿದ ಹಣ್ಣನ್ನು ಸೇವಿಸಲು ನೀಡಿ.
- ಆರು ತಿಂಗಳ ನಂತರದ ಶಿಶುವಿಗೆ ತಾಯಿಯ ಎದೆಹಾಲಿನ ಜೊತೆಗೆ ಖನಿಜಾಂಶ ತುಂಬಿದ ಸಿರಿಧಾನ್ಯಗಳ ಆಹಾರ ನೀಡಬೇಕು.
- ಶಿಶುವಿಗೆ ಮೊದಲ ವರ್ಷ ತುಂಬುವವರೆಗೂ ಹಸುವಿನ ಹಾಲು ನೀಡದಿರುವುದು ಒಳಿತು.
- ನವಜಾತ ಶಿಶುವಿನ ಹಂತದಿಂದಲೇ ಬಾಯಿಯ ಆರೋಗ್ಯಕ್ಕಾಗಿ ನಿಯಮಿತ ತಪಾಸಣೆಗಳನ್ನು ಮಾಡಿಸುವುದು ಪೋಷಕರ ಮಹತ್ವದ ಜವಾಬ್ದಾರಿ.