ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು ಖಾತರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ವಿವಿಧೆಡೆ ರೈತರು ನಾಲ್ಕು ಗಂಟೆಗಳ ಕಾಲ ರೈಲು ಹಳಿಗಳ ಮೇಲೆ ಕುಳಿತು ಭಾನುವಾರ ಪ್ರತಿಭಟನೆ ನಡೆಸಿದರು.

'ರೈಲ್ ರೋಕೊ' ಆಂದೋಲನಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಕರೆ ನೀಡಿತ್ತು.
ತಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.
ಪಂಜಾಬ್‌ನಲ್ಲಿ 9 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಒಟ್ಟು 49 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾದ ಪರಿಣಾಮವಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.
ಶಂಭು ಗಡಿಯಲ್ಲಿ ರೈತರ ಧರಣಿ ಮುಂದುವರಿದಿದ್ದು, ಶಂಭು ರೈಲು ನಿಲ್ದಾಣದಲ್ಲಿ ಸಮೀಪದ ಗ್ರಾಮಗಳ ರೈತರು ರೈಲು ತಡೆ ನಡೆಸಿದರು.
'ದೇಶದಾದ್ಯಂತ ಪ್ರತಿಭಟನೆ ನಡೆದಿದೆ. ಇದು ಈ ಆಂದೋಲನಕ್ಕೆ ದೇಶದ ಎಲ್ಲೆಡೆಯ ರೈತರು ಬೆಂಬಲ ಸೂಚಿಸಿದ್ದಾರೆ ಎಂಬುದಕ್ಕೆ ಸಾಕ್ಷಿ. ಆದರೆ ಆಡಳಿತಾರೂಢ ಪಕ್ಷವು ದೂರ ಓಡಿ ಹೋಗುತ್ತಿದೆ' ಎಂದು ಎಸ್‌ಕೆಎಂನ ಸಂಯೋಜಕ ಜಗಜೀತ್ ಸಿಂಗ್ ದಲ್ಲೆವಾಲ್ ತಿಳಿಸಿದರು.
ರೈತರ ಮೇಲೆ ಗುಂಡು ಹಾರಿಸಲು ಆದೇಶ ನೀಡಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಶುಭಕರಣ್ ಸಿಂಗ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.