ಇಸ್ಲಾಮಾಬಾದ್: ಪಿಎಂಎಲ್-ಎನ್ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ 33ನೆಯ ಪ್ರಧಾನಿಯಾಗಿ ಭಾನುವಾರ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.
ಪಿಎಂಎಲ್-ಎನ್ ಮತ್ತು ಪಿಪಿಪಿ ಪಕ್ಷಗಳ ಅಭ್ಯರ್ಥಿಯಾಗಿರುವ ಶೆಹಬಾಜ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಶೆಹಬಾಜ್ ಅವರು ನವಾಜ್ ಶರೀಫ್ ಅವರ ತಮ್ಮ. ಹೊಸ ಪ್ರಧಾನಿಯ ಆಯ್ಕೆಗೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭಾನುವಾರ ಮತದಾನ ನಡೆಯಲಿದೆ. ಗೆಲುವು ಕಂಡ ಅಭ್ಯರ್ಥಿಗೆ ಸೋಮವಾರ ಪ್ರಮಾಣ ವಚನ ಬೋಧಿಸಲಾಗುತ್ತದೆ.
ಶೆಹಬಾಜ್ ಅವರು ಅರ್ಥವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ನಿಭಾಯಿಸಬೇಕಿದೆ, ಭಯೋತ್ಪಾದನೆಯ ಸವಾಲು ಎದುರಿಸುವ ಹೊಣೆ ಕೂಡ ಅವರ ಮುಂದೆ ಇದೆ. ಈಚೆಗೆ ನಡೆದ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು ಆರೋಪಿಸಿದ್ದು, ಆ ಪಕ್ಷದ ಪ್ರತಿಭಟನೆಯ ಕಾವನ್ನು ಕೂಡ ಶೆಹಬಾಜ್ ಶಮನಗೊಳಿಸಬೇಕಿದೆ.
ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಹಾಗೂ ಉಪ ಸ್ಪೀಕರ್ ಹುದ್ದೆಗಳಿಗೆ ಪಿಎಂಎಲ್-ಎನ್, ಪಿಪಿಪಿ ಜೊತೆಯಾಗಿ ಕಣಕ್ಕಿಳಿಸಿದಿದ್ದ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಶೆಹಬಾಜ್ ಅವರ ಗೆಲುವು ಕೂಡ ಬಹುತೇಕ ಖಚಿತ ಎನ್ನಲಾಗಿದೆ.
ಇಮ್ರಾನ್ ಖಾನ್ ಅವರ ಜೊತೆ ನಿಕಟ ಸಂಬಂಧ ಹೊಂದಿರುವ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ನೂತನ ಪ್ರಧಾನಿಗೆ ಪ್ರಮಾಣ ವಚನ ಬೋಧಿಸಲು ಸಮ್ಮತಿಸಿದ್ದಾರೆ ಎಂದು 'ಉನ್ನತ ಮೂಲಗಳನ್ನು' ಉಲ್ಲೇಖಿಸಿ 'ದಿ ನ್ಯೂಸ್ ಇಂಟರ್‌ನ್ಯಾಷನಲ್' ಪತ್ರಿಕೆಯು ವರದಿ ಮಾಡಿದೆ.