ಪಟ್ನಾ: ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ನಾಯಕರು ಭಾನುವಾರ ಇಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಂಡು ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು.
'ಭಾರತ್ ಜೋಡೊ ನ್ಯಾಯ ಯಾತ್ರೆ'ಗೆ ಅಲ್ಪವಿರಾಮ ಹಾಕಿ ಮಧ್ಯಪ್ರದೇಶದಿಂದ ಇಲ್ಲಿಗೆ ಬಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಜನ ವಿಶ್ವಾಸ್' ರ್‍ಯಾಲಿಯನ್ನುದ್ದೇಶಿಸಿ 15 ನಿಮಿಷ ಮಾತನಾಡಿದರು.
'ಕೇಂದ್ರ ಸರ್ಕಾರವು 2-3 ಮಂದಿ ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದ್ದು, ದೇಶದ ಜನಸಂಖ್ಯೆಯ ಶೇ 73 ರಷ್ಟಿರುವ ದಲಿತರು ಮತ್ತು ಹಿಂದುಳಿದ ವರ್ಗದವರನ್ನು ನಿರ್ಲಕ್ಷಿಸಿದೆ' ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟ ಅತಿಹೆಚ್ಚಿನ ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ ಮತ್ತು ಐ.ಟಿ ಸೇರಿದಂತೆ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸುತ್ತಿದೆ. ಆದರೆ ಕೇಂದ್ರದ ಬೆದರಿಕೆಗೆ ನಮ್ಮ ನಾಯಕರು ಮಣಿಯುವುದಿಲ್ಲ' ಎಂದರು.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷದೇಶದ ಅಭ್ಯುದಯ ಮತ್ತು ಸಂವಿಧಾನದ ರಕ್ಷಣೆಗಾಗಿ ನರೇಂದ್ರ ಮೋದಿ ಸರಕಾರವನ್ನು ಈ ಬಾರಿ ಕೆಳಗಿಳಿಸಲೇಬೇಕು.ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಅವರು ತಮ್ಮ ಮಾತಿನುದ್ದಕ್ಕೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ಅವರ ಕಾಲೆಳೆದರು. 'ಮುಂಬರುವ ಚುನಾವಣೆಗೆ ಸಿದ್ಧರಾಗಿ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ದೂರವಿಡಲು ನೀವು ಮತ ಚಲಾಯಿಸುವಾಗ ಆತ್ಮಸ್ಥೈರ್ಯ ಹೆಚ್ಚಿಸಲು ನಾನೂ ನಿಮ್ಮೊಂದಿಗೆ ಇರುತ್ತೇನೆ' ಎಂದರು.
ಬಿಜೆಪಿ 'ಸುಳ್ಳಿನ ಕಾರ್ಖಾನೆ': ಬಿಜೆಪಿಯನ್ನು 'ಸುಳ್ಳಿನ ಕಾರ್ಖಾನೆ' ಎಂದು ಟೀಕಿಸಿದ ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, 'ನಮ್ಮ ಪಕ್ಷವು ಹಕ್ಕುಗಳು, ಉದ್ಯೋಗ ಮತ್ತು ಅಭಿವೃದ್ಧಿ'ಯ ಪರವಾಗಿದೆ ಎಂದು ಹೇಳಿದರು.
'ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತಾರೆ. ಆದರೆ ನಾವು ಬಿಹಾರ ಒಳಗೊಂಡಂತೆ ದೇಶದ ಜನರ ಹಕ್ಕುಗಳು ಮತ್ತು ಉದ್ಯೋಗಕ್ಕಾಗಿ ಹೋರಾಟ ಮಾಡುತ್ತೇವೆ' ಎಂದರು.
ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್, 'ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಒಟ್ಟು 120 ಲೋಕಸಭಾ ಕ್ಷೇತ್ರಗಳಿವೆ. ಈ ಎರಡು ರಾಜ್ಯಗಳಲ್ಲಿ ಬಿಜೆಪಿಯ ಪತನವನ್ನು ಖಚಿತಪಡಿಸಿದರೆ, ಅವರು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ' ಎಂದು ನುಡಿದರು.
ಎಡಪಕ್ಷಗಳ ಮುಖಂಡರಾದ ಸೀತಾರಾಮ್ ಯೆಚೂರಿ, ಡಿ.ರಾಜಾ ಮತ್ತು ದೀಪಾಂಕರ್ ಭಟ್ಟಾಚಾರ್ಯ ಅವರು ಪಾಲ್ಗೊಂಡರು.