ಕಾಸರಗೋಡು: ಯುವಕನನ್ನು ಹೊಡೆದು ಕೊಂದ ಪ್ರಕರಣದಲ್ಲಿ ಮೂವರು ಬಂಧಿತರಾಗಿದ್ದಾರೆ. ಮೀಯಪದವು ನಿವಾಸಿ ಆರಿಫ್ (21) ಕಳೆದ ಸೋಮವಾರ ಮೃತಪಟ್ಟಿದ್ದ.
ಪೋಲೀಸರ ತನಿಖೆಯಲ್ಲಿ ಆರೀಫ್ ಸಾವು ಕೊಲೆ ಎಂಬುದು ಸ್ಪಷ್ಟವಾಗಿತ್ತು. ಥಳಿಸಿದ್ದರಿಂದ ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ನಿತ್ಯ ಮದ್ಯಪಾನ ಮಾಡಿ ಮನೆಯಲ್ಲಿ ತೊಂದರೆ ಕೊಡುತ್ತಿದ್ದ ಕಾರಣಕ್ಕೆ ಹಲ್ಲೆ ನಡೆದಿದೆ. ಘಟನೆ ಸಂಬಂಧ ಮಂಜೇಶ್ವರ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ: ಮಂಜೇಶ್ವರ ಪೋಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೀಯಪದವು ಮದಲಕಟ್ಟ ನಿವಾಸಿ ದಿವಂಗತ ಅಬ್ದುಲ್ಲ ಎಂಬವರ ಪುತ್ರ ಮೊಹಮ್ಮದ್ ಆರಿಫ್ (22) ಸಾವನ್ನಪ್ಪಿದ ದುರ್ದೈವಿ.
ಆರಿಫ್ ನ ಶರೀರದಲ್ಲಿ ಹಲ್ಲೆಗೊಳಗಾದ ಗಾಯಗಳು ಪತ್ತೆಯಾಗಿದೆ. ಹಲ್ಲೆಯಿಂದ ಸಾವು ಸಂಭವಿಸಿರಬಹುದಾಗಿದೆ ಎಂದು ಸಂಬಂಧಿಕರು ಶಂಕೆ ವ್ಯಕ್ತ ಪಡಿಸಿದ್ದರು. ಮೀಯಪದವು ಪರಿಸರದಲ್ಲಿ ಗಾಂಜಾ ವ್ಯಸನಿಗಳು ಅಟ್ಟಹಾಸ ಮೆರೆಯುತ್ತಿರುವ ಬಗ್ಗೆ ಪೋಲೀಸರಿಗೆ ಲಭಿಸಿದ ಮಾಹಿತಿಯಂತೆ ಸ್ಥಳಕ್ಕೆ ಪೋಲೀಸರು ತಲುಪಿದಾಗ ಆರಿಫ್ ಪತ್ತೆಯಾಗಿದ್ದಾನೆ. ಆರಿಫ್ ನನ್ನು ವಶಕ್ಕೆ ತೆಗೆದ ಪೋಲೀಸರು ಕೂಡಲೇ ಮನೆಯವರನ್ನು ಕರೆಸಿ ಅವರ ಜೊತೆಯಾಗಿ ಕಳಿಸಿ ಕೊಟ್ಟಿದ್ದಾರೆ.
ಮನೆಯವರ ಜೊತೆಯಾಗಿ ಹೋಗಲು ನಿರಾಕರಿಸಿ ತಪ್ಪಿಸಲೆತ್ನಿಸುವಾಗ ಬಲವಂತವಾಗಿ ಆರಿಫ್ ನನ್ನು ಮನೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಬೆಳಿಗ್ಗೆ ಆರಿಫ್ ನಿಗೆ ಅಸ್ವಸ್ಥತೆ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಮಂಗಳೂರು ಆಸ್ಪತ್ರೆ ತಲುಪಿಸಿದಾಗ ಕ್ಷಣದಲ್ಲೇ ಅಲ್ಲೇ ಕುಸಿದು ಬಿದ್ದು ಸಾವು ಸಂಭವಿಸಿದೆ.
ಸಾವಿನಲ್ಲಿ ನಿಗೂಢತೆ ಕೇಳಿ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಮೃತ ಶರೀರವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿತ್ತು. ಪೋಲೀಸ್ ಠಾಣೆಯಿಂದ ಬಿಡುಗಡೆಗೊಳಿಸಿ ಕರೆದೊಯ್ದ ಸಂಬಂಧಿಕಾರದ ಮೂವರನ್ನು ಕೇಂದ್ರೀಕರಿಸಿ ಪೋಲೀಸರು ತನಿಖೆ ನಡೆಸಿದ್ದರು.