ನವದೆಹಲಿ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿರುವ ಉದಯನಿಧಿ ಅವರು, ಈಗ ಅರ್ಜಿ ಹಿಡಿದುಕೊಂಡು ನ್ಯಾಯಾಲಯಕ್ಕೆ ಬಂದಿರುವುದು ಏಕೆ?
ತಮ್ಮ ಹೇಳಿಕೆ ಕುರಿತಂತೆ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಗ್ಗೂಡಿಸಬೇಕೆಂದು ಸ್ಟಾಲಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ನೇತೃತ್ವದ ಪೀಠವು, ಮನವಿ ಪುರಸ್ಕರಿಸಲು ನಿರಾಕರಿಸಿದೆ.
'ಸ್ಟಾಲಿನ್ ಒಬ್ಬ ಮಂತ್ರಿ, ಸಾಮಾನ್ಯ ವ್ಯಕ್ತಿಯಲ್ಲ. ತಮ್ಮ ಹೇಳಿಕೆಯ ಪರಿಣಾಮ ಏನು ಎಂಬುದರ ಅರಿವು ಅವರಿಗೆ ಆಗಬೇಕು' ಎಂದು ಸ್ಟಾಲಿನ್ ಪರ ಹಾಜರಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನ್ಯಾಯಪೀಠ ಹೇಳಿದೆ.
'ಸಂವಿಧಾನದ ಪರಿಚ್ಛೇದ 19(1)(ಎ) ಅಡಿಯಲ್ಲಿ ಬರುವ ಹಕ್ಕನ್ನು ನೀವು ದುರುಪಯೋಗಪಡಿಸಿಕೊಂಡಿದ್ದೀರಿ, ಪರಿಚ್ಛೇದ 25ರ ಅಡಿಯ ನಿಮ್ಮ ಹಕ್ಕನ್ನೂ ನೀವು ಉಲ್ಲಂಘಿಸಿದ್ದೀರಿ. ಈಗ ಪರಿಚ್ಛೇದ 32ರ ಅಡಿ ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ಹೇಳಿಕೆಯ ಪರಿಣಾಮ ಏನು ಎಂಬುದರ ಅರಿವು ನಿಮಗೆ ಇದೆಯೇ? ನೀವೊಬ್ಬ ಸಾಮಾನ್ಯ ವ್ಯಕ್ತಿಯಲ್ಲ. ನೀವೊಬ್ಬ ಸಚಿವ. ನಿಮ್ಮ ಹೇಳಿಕೆಯ ಪರಿಣಾಮ ನಿಮಗೆ ತಿಳಿಯಬೇಕು' ಎಂದು ಹೇಳಿದ ಪೀಠವು ಮಾರ್ಚ್ 15ಕ್ಕೆ ವಿಚಾರಣೆ ಮುಂದೂಡಿದೆ.
2023ರ ಸೆಪ್ಟೆಂಬರ್‌ನಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ, ಅದನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿದ್ದರು.