ಲಖನೌ: ಕ್ಷೌರಿಕ ವೃತ್ತಿ ನಡೆಸುತ್ತಿದ್ದ ಇಬ್ಬರು ಸಹೋದರರು ತಮ್ಮ ಸಲೂನ್ ಶಾಪ್ ಸಮೀಪದ ಪರಿಚಿತರ ಮನೆಯ ಇಬ್ಬರು ಮಕ್ಕಳನ್ನು ಚಾಕೂವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಬದೌನ್ ಪಟ್ಟಣದಲ್ಲಿ ನಡೆದಿದೆ.
ಕೊಲೆಯಾದ 13 ವರ್ಷ ಮತ್ತು 6 ವರ್ಷದ ಮಕ್ಕಳು ಇಬ್ಬರು ಸಹೋದರರು.
ಮಂಗಳವಾರ ರಾತ್ರಿ ಈ ಘಟನೆ ನಡೆದ ಕೆಲವೇ ತಾಸುಗಳಲ್ಲಿ ಆರೋಪಿ ಸಾಜಿದ್ ಎಂಬಾತ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಇತರ ಆರೋಪಿಗಳಾದ ಜಾವೇದ್ ಮತ್ತು ಅವರ ತಂದೆ ಹಾಗೂ ಚಿಕ್ಕಪ್ಪನನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕೆ ತೀವ್ರ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಹತ್ಯೆಯಿಂದ ಪಟ್ಟಣದಲ್ಲಿ ಕೋಮು ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ರೋಶಿತ ಜನರ ಗುಂಪು ಆರೋಪಿಗಳ ಸಲೂನ್ ಶಾಪ್ ಸೇರಿದಂತೆ ಕೆಲವು ಅಂಗಡಿಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯ ಎದುರು ಗಲಾಟೆ ನಡೆಸಿ, ಉಳಿದಿಬ್ಬರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಘಟನೆ ವಿವರ:
ಪೊಲೀಸ್ ಮೂಲಗಳ ಪ್ರಕಾರ, ಸಲೂನ್ ಶಾಪ್ ನಡೆಸುತ್ತಿದ್ದ ಸಾಜಿದ್ ಮತ್ತು ಆತನ ಸಹೋದರ ಜಾವೇದ್ ಹಾಗೂ ಸಹಚರರು ಮಂಗಳವಾರ ಸಂಜೆ, ಸಂತ್ರಸ್ತ ಮಕ್ಕಳ ಮನೆಗೆ ಹೋಗಿದ್ದಾರೆ. ಸಾಜಿದ್ ಮನೆಯೊಳಗೆ ಹೋದರೆ, ಜಾವೇದ್ ಮತ್ತು ಸಹಚರರು ಹೊರಗೆ ಕಾಯುತ್ತಿದ್ದರು. ಈ ಮಕ್ಕಳ ಕುಟುಂಬಕ್ಕೆ ಆತ್ಮೀಯನಾಗಿದ್ದ ಸಾಜಿದ್, ಮಕ್ಕಳ ತಾಯಿಯಿಂದ ₹5 ಸಾವಿರ ಸಾಲ ಕೇಳಿ ಪಡೆದುಕೊಂಡಿದ್ದು, ಆ ಇಬ್ಬರು ಮಕ್ಕಳೊಂದಿಗೆ ಮನೆಯ ಮಹಡಿಗೆ ಹೋಗಿದ್ದಾನೆ. ಅಲ್ಲಿ ಅವರನ್ನು ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ಸಾಜಿದ್‌ಗೆ ನೀರು ಕೊಡಲು ಮಹಡಿಗೆ ಹೋದ ಇದೇ ಮನೆಯ ಇನ್ನೊಂದು ಮಗು ಘಟನೆಗೆ ಸಾಕ್ಷಿಯಾಗಿದೆ. ಆಗ, ಸಾಜಿದ್ ಆ ಮಗುವಿನ ಕೊಲೆಗೂ ಯತ್ನಿಸಿದ್ದಾನೆ. ಆದರೆ, ಆ ಮಗು ಆರೋಪಿಯನ್ನು ತಳ್ಳಿ ತಪ್ಪಿಸಿಕೊಂಡಿದೆ. ನಂತರ ಸಾಜಿದ್, ಜಾವೇದ್ ಮತ್ತು ಸಹಚರರೂ ಸ್ಥಳದಿಂದ ಪರಾರಿಯಾಗಿದ್ದಾರೆ.
'ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದಾಗ ಸಮೀಪದ ಕಾಡಿನಲ್ಲಿ ಸಾಜಿದ್ ಪತ್ತೆಯಾದ. ಆರೋಪಿಗೆ ಶರಣಾಗಲು ಸೂಚಿಸಿದರೆ, ಆತ ಪೊಲೀಸರ ಮೇಲೆ ಗುಂಡು ಹಾರಿಸಿದ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿ ಗುಂಡಿನ ದಾಳಿಯಲ್ಲಿ ಸಾಜಿದ್ ಸತ್ತಿದ್ದಾನೆ. ಘಟನೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.