ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಿಂದ ಮತ್ತೆ ಸ್ಪರ್ಧೆ ಮಾಡಲು ಸಿದ್ಧರಾಗಿದ್ದಾರೆ. ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್ ಸ್ಪರ್ಧೆ ಮಾಡಲಿದ್ದಾರೆಯೇ ಇಲ್ಲವೇ ಎಂಬುದು ಖಚಿತಗೊಂಡಿಲ್ಲ.
ವಯನಾಡು ಕ್ಷೇತ್ರದಲ್ಲಿ ಹಿರಿಯ ನಾಯಕಿ ಆನಿ ರಾಜಾ ಅವರನ್ನು ಕಣಕ್ಕಿಳಿಸಲು ಸಿಪಿಐ ನಿರ್ಧರಿಸಿದೆ. ಸಿಪಿಐ ಕೇರಳದ ಆಡಳಿತಾರೂಢ ಎಲ್‌ಡಿಎಫ್ ಮೈತ್ರಿಕೂಟದ ಎರಡನೇ ದೊಡ್ಡ ಪಕ್ಷ. ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರ ಪತ್ನಿ ಆನಿ, ಸಿಪಿಐ ಮಹಿಳಾ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ತಿರುವನಂತಪುರದಿಂದ ಹಾಲಿ ಸಂಸದ ಶಶಿ ತರೂರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಕ್ಷೇತ್ರಕ್ಕೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ರಾಜನಂದಗಾಂವ್‌ನಿಂದ, ಮಾಜಿ ಸಚಿವ ತಾಮ್ರಧ್ವಜ್ ಸಾಹು ಅವರನ್ನು ದುರ್ಗ್‌ನಿಂದ ಮತ್ತು ರಾಜ್ಯ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಅವರನ್ನು ಬಸ್ತಾರ್‌ನಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ. ಮಾಜಿ ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಸ್ಪರ್ಧಿಸುವ ಸಾಧ್ಯತೆ ಕಡಿಮೆ.
ತೆಲಂಗಾಣದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಗಿದೆ. ಕೇರಳದ ಎಲ್ಲ ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ದೆಹಲಿಯಲ್ಲಿ ಮೂರು ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ. ಪಕ್ಷದ ರಾಜ್ಯ ಘಟಕವು ಪ್ರತಿ ಕ್ಷೇತ್ರಕ್ಕೆ ಮೂರು ಹೆಸರುಗಳನ್ನು ಶಿಫಾರಸು ಮಾಡಿತ್ತು. ಪ್ರತಿ ಕ್ಷೇತ್ರಕ್ಕೆ ಏಕ ಹೆಸರನ್ನು ಶಿಫಾರಸು ಮಾಡುವಂತೆ ಚುನಾವಣಾ ಸಮಿತಿ ಸೂಚಿಸಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಸಭೆ ನಡೆಯಲಿದೆ.
ಚಾಂದಿನಿ ಚೌಕ್‌ಗೆ ಅಲ್ಕಾ ಲಾಂಬಾ, ಜೆ.ಪಿ. ಅಗರವಾಲ್ ಮತ್ತು ಸಂದೀಪ್ ದೀಕ್ಷಿತ್ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಈಶಾನ್ಯ ದೆಹಲಿಗೆ ಅರವಿಂದ್ ಲವ್ಲಿ ಮತ್ತು ಅನಿಲ್ ಚೌಧರಿ ಹೆಸರನ್ನು ಸೂಚಿಸಲಾಗಿದೆ. ಮೀಸಲು ಈಶಾನ್ಯ ದೆಹಲಿಗೆ ಉದಿತ್ ರಾಜ್ ಮತ್ತು ರಾಜ್‌ಕುಮಾರ್ ಚೌಹಾಣ್ ಹೆಸರನ್ನು ರಾಜ್ಯ ಘಟಕ ಶಿಫಾರಸು ಮಾಡಿದೆ.