ಜೈಪುರ: ರಾಜಸ್ಥಾನದ ಜೈಪುರದಲ್ಲಿ ಗುರುವಾರ ಎಲ್‌ಪಿಜಿ ಸಿಲಿಂಡರ್ ಬದಲಾಯಿಸುವ ವೇಳೆ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅವಘಡದಲ್ಲಿ ಯುವ ದಂಪತಿಗಳು ಮತ್ತು ಅವರ ಮೂವರು ಮಕ್ಕಳು ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರದ ವಿಶ್ವಕರ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಈ ದುರಂತ ಸಂಭವಿಸಿದ್ದು, ಮನೆಯಲ್ಲಿದ್ದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ರಾಜೇಶ್ ಯಾದವ್(25) ಗ್ಯಾಸ್ ಸಿಲಿಂಡರ್ ಬದಲಾಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಎಸ್‌ಎಚ್‌ಒ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಯಾದವ್, ಅವರ ಪತ್ನಿ ರೂಬಿ(24), ಅವರ ಪುತ್ರಿಯರಾದ ಇಶು(7), ಖುಷಿಮಣಿ (4) ಮತ್ತು ಮಗ ದಿಲ್ಖುಷ್(2) ಕೋಣೆಯಲ್ಲಿದ್ದರು ಮತ್ತು ಅವರಲ್ಲಿ ಯಾರೂ ಹೊರಗೆ ಬರಲು ಸಾಧ್ಯವಾಗಲಿಲ್ಲ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಒಟ್ಟು 17-18 ಕೊಠಡಿಗಳಿರುವ ವಸತಿ ಕಟ್ಟಡದ ಕೊಠಡಿಯೊಂದರಲ್ಲಿ ಈ ಕುಟುಂಬ ವಾಸಿಸುತ್ತಿತ್ತು ಎಂದು ಎಸ್‌ಎಚ್‌ಒ ಹೇಳಿದ್ದಾರೆ.
ಬಿಹಾರದ ಮೋತಿಹಾರಿ ಮೂಲದ ಯಾದವ್, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಕಳೆದ ನಾಲ್ಕು ತಿಂಗಳಿನಿಂದ ಅಲ್ಲಿಯೇ ವಾಸಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯಿಂದ ಬೇರೆ ಇತರ ಯಾವುದೇ ಕೊಠಡಿಗೆ ಹಾನಿಯಾಗಿಲ್ಲ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು, ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.