ಕಾಸರಗೋಡು: ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಲ್ಲಿ ಕೈಟ್ ಬೀಚ್ ಪಾರ್ಕ್ ಸಹಕಾರಿಯಾಗಲಿದ್ದು, ಈ ಮೂಲಕ ಕೇರಳ ಪ್ರವಾಸಿಗಳಿಗೆ ನೆಚ್ಚಿನ ತಾಣವಾಗಲಿರುವುದಾಗಿ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ. ಅವರು ಪ್ರವಾಸೋದ್ಯಮ ಇಲಾಖೆ ವತಿಯಿಂದ ಹೊಸದುರ್ಗ ಸಮುದ್ರ ಕರಾವಳಿಯಲ್ಲಿ ನಿರ್ಮಿಸಿರುವ ಕೈಟ್ ಬೀಚ್ ಪಾರ್ಕನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೈಟ್ ಬೀಚ್ ಪಾರ್ಕನ್ನು ಮತ್ತಷ್ಟು ಆಕರ್ಷಕಗೊಳಿಸಲು ಪ್ರವಾಸೋದ್ಯಮ ಇಲಾಖೆ 1.25 ಕೋಟಿ ರೂ. ವೆಚ್ಚದಲ್ಲಿ ಪಾರ್ಕನ್ನು ಅಬಿವೃದ್ಧಿಗೊಳಿಸಿದೆ. ಬೇಕಲದಲ್ಲೂ ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆ ಇಡುತ್ತಿದ್ದು, ಅಜನೂರು ಗ್ರಾಮ ಪಂಚಾಯಿತಿಯ ಕುಲವಯಲ್‍ನಲ್ಲಿ ಬೇಕಲ ಗ್ರಾಮ ಪ್ರವಾಸೋದ್ಯಮ ಯೋಜನೆ ಆರಂಭಗೊಳ್ಳಳಿದೆ. ಯೋಜನೆಪೂರ್ಣಗೊಂಡಲ್ಲಿ ಈ ಪ್ರದೇಶದಲ್ಲಿ ಮಹತ್ವದ ಅಭಿವೃದ್ಧಿಗೆ ಕಾರಣವಾಗುವುದರ ಜತೆಗೆ ಕೇರಳ ಪ್ರವಾಸಿಗರ ನೆಚ್ಚಿನ ತಾಣವಾಗುತ್ತಿದೆ. ಪ್ರತಿ ವರ್ಷ ಕೇರಳಕ್ಕೆ ಭೇಟಿ ನೀಡುವ ಒಟ್ಟು ಪ್ರವಾಸಿಗರು ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವುಂಟಾಗಿದೆ ಎಂದು ತಿಳಿಸಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಇ.ಪಿ.ರಾಜಮೋಹನ್ ವರದಿ ಮಂಡಿಸಿದರು. ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಡಿಟಿಪಿಸಿ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಕಾಞಂಗಾಡು ನಗರಸಭಾ ಸದಸ್ಯ ವಿ.ವಿ.ರಮೇಶನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ, ಪಿ.ಅಹಮದಾಲಿ, ಕೆ.ಪ್ರಭಾವತಿ, ಕೆ.ವಿ.ಸರಸ್ವತಿ, ವಾರ್ಡ್ ಕೌನ್ಸಿಲರ್ ಸಿ.ಎಚ್.ಸುಬೈದಾ, ಪಿ.ಕೆ.ನಿಶಾಂತ್, ಮಹಮ್ಮದ್‍ಕುಞÂ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ 1.25 ಕೋಟಿ ವೆಚ್ಚದಲ್ಲಿ ಮಕ್ಕಳ ಆಟದ ಮೈದಾನ, ಫುಡ್ ಕೋರ್ಟ್, ಅಂಗವಿಕಲರ ಸ್ನೇಹಿ ಶೌಚಾಲಯ, ಆಸನ, ಸೆಲ್ಫಿ ಪಾಯಿಂಟ್, ಶಾಪಿಂಗ್ ಮಳಿಗೆ ಮುಂತಾದ ಸೌಲಭ್ಯಗಳಿವೆ.