ಕುಂಬಳೆ: ಸಾವಿರಾರು ಮಂದಿಯ ಪ್ರಾರ್ಥನಾಘೋಷದ ನಡುವೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ ಗುರುವಾರ ಸಂಪನ್ನಗೊಂಡಿತು. ವಾಣಿಯ ಸಮುದಾಯದ ಕುಲದೇವತೆ ಶ್ರಿ ಮುಚ್ಚಿಲೋಟ್ ಭಗವತೀ ನೆಲೆನಿಂತಿರುವ ಕೇರಳದ ಪ್ರಧಾನ ಹದಿನೆಂಟು ಮುಚ್ಚಿಲೋಟ್ ಕ್ಷೆತ್ರಗಳಲ್ಲಿ ಒಂದಾದ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತದಲ್ಲಿ 20ವರ್ಷಗಳ ನಂತರ ಇದೇ ಮೊದಲ ಬಾರಿಗೆ ಶ್ರೀ ಭಗವತೀ ಮಾತೆಯ ಸಂಭ್ರಮದ ಕಳಿಯಾಟ ನಡೆಯಿತು.
ಕಾಸರಗೋಡು ಅಲ್ಲದೆ ನೆರೆಯ ಕಣ್ಣೂರು, ದ.ಕ, ಉಡುಪಿ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಪೆರ್ಣೆ ಕ್ಷೇತ್ರಕ್ಕೆ ಹರಿದುಬಂದಿದ್ದರು. ಸುಮಾರು 50ಸಾವಿರ ಮಂದಿ ಮಧ್ಯಾಹ್ನದ ಭೋಜನ ಪ್ರಸಾದ ಸ್ವೀಕರಿಸಿದರು.
ಬೆಳಗ್ಗೆ ನರಂಬಿಲ್ ಭಗವತೀ ದೈವದ ನರ್ತನ, ಪುಲ್ಲೂರ್‍ಕಾಳಿ ದೈದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿಸೇವೆ, ಶ್ರೀ ಮುಚ್ಚಿಲೋಟ್ ಭಗವತೀ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್‍ಕಾಳಿ ದೈವದೊಂದಿಗೆ ಭೇಟಿ, ಪ್ರಸಾದ ವಿತರಣೆ ನಡೆಯಿತು. ಸುಮಾರು ಎರಡು ಸಾವಿರ ಮಂದಿ ಸ್ವಯಂಸೇವಕರು ಮಹೋತ್ಸವವನ್ನು ಅಚ್ಚುಕಟ್ಟು ಹಾಗೂ ಯಶಸ್ವಿಯಾಗಿ ನೆರವೇರಲು ಸಹಕರಿಸಿದ್ದರು.