ಜಗ್ತಿಯಾಲ್: ಇಂಡಿಯಾ ಒಕ್ಕೂಟದ ಪ್ರಣಾಳಿಕೆಯು 'ಶಕ್ತಿ'ಯನ್ನು ನಾಶಗೊಳಿಸುವ ಕುರಿತು ಹೇಳಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು 'ಶಕ್ತಿ'ಯನ್ನು ನಾಶಮಾಡಲು ಬಯಸುವವರು ಮತ್ತು ಅವರನ್ನು ಆರಾಧಿಸುವವರ ನಡುವಿನ ಹೋರಾಟ ಎಂದು ಹೇಳಿದ್ದಾರೆ.
ಜಗ್ತಿಯಾಲ್: ಇಂಡಿಯಾ ಒಕ್ಕೂಟದ ಪ್ರಣಾಳಿಕೆಯು 'ಶಕ್ತಿ'ಯನ್ನು ನಾಶಗೊಳಿಸುವ ಕುರಿತು ಹೇಳಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದು 'ಶಕ್ತಿ'ಯನ್ನು ನಾಶಮಾಡಲು ಬಯಸುವವರು ಮತ್ತು ಅವರನ್ನು ಆರಾಧಿಸುವವರ ನಡುವಿನ ಹೋರಾಟ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ರ್‍ಯಾಲಿಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ನನಗೆ ಪ್ರತಿಯೊಬ್ಬ ತಾಯಿ ಮತ್ತು ಪ್ರತಿ ಮಗಳು 'ಶಕ್ತಿ'ಯ ರೂಪ. ಅವರನ್ನು ಆರಾಧಿಸುತ್ತೇನೆ' ಎಂದಿದ್ದಾರೆ.
ರಾಷ್ಟ್ರವು 'ಚಂದ್ರಯಾನ' ಯಶಸ್ಸನ್ನು 'ಶಿವ ಶಕ್ತಿ'ಗೆ ಅರ್ಪಿಸಿದೆ. ಅಂಥಹದ್ದರಲ್ಲಿ ವಿರೋಧ ಪಕ್ಷಗಳು 'ಶಕ್ತಿ'ಯನ್ನು ನಾಶಪಡಿಸುವ ಬಗ್ಗೆ ಮಾತನಾಡುತ್ತಿವೆ ಎಂದರು.
ಮುಂಬೈನಲ್ಲಿ ಭಾನುವಾರ, ಚುನಾವಣೆಯ ವೇಳಾಪಟ್ಟಿಯ ಘೋಷಣೆಯ ನಂತರ ಇಂಡಿಯಾ ಒಕ್ಕೂಟದ ರ್‍ಯಾಲಿ ನಡೆದಿತ್ತು. ಈ ವೇಳೆ ಒಕ್ಕೂಟವು ತಮ್ಮ ಪ್ರಣಾಳಿಕೆಯನ್ನು ಘೋಷಿಸಿತ್ತು. ಅದರಲ್ಲಿ ನಮ್ಮ ಹೋರಾಟವು 'ಶಕ್ತಿ' ವಿರುದ್ಧವಾಗಿದೆ ಎಂದು ಹೇಳಿದ್ದರು. ಆದರೆ ಪ್ರತಿ ಹೆಣ್ಣು ಮಗಳು 'ಶಕ್ತಿ'ಯ ರೂಪ. ತಾಯಂದಿರೇ ಮತ್ತು ಸಹೋದರಿಯರೇ, ನಾನು ನಿಮ್ಮನ್ನು 'ಶಕ್ತಿ' ಎಂದು ಪೂಜಿಸುತ್ತೇನೆ, ನಾನು ಭಾರತ ಮಾತೆಯ 'ಪೂಜಾರಿ' ಎಂದು ಮೋದಿ ವಿಪಕ್ಷಗಳ ಒಕ್ಕೂಟಕ್ಕೆ ತಿರುಗೇಟು ನೀಡಿದ್ದಾರೆ.
ಇಂಡಿಯಾ ಒಕ್ಕೂಟವು ತನ್ನ ಪ್ರಣಾಳಿಕೆಯಲ್ಲಿ ಶಕ್ತಿಯನ್ನು ನಾಶಗೊಳಿಸುವುದಾಗಿ ಘೋಷಿಸಿದೆ. ನಾನು ಅವರ ಸವಾಲನ್ನು ಸ್ವೀಕರಿಸುತ್ತೇನೆ. ತಾಯಂದಿರು ಮತ್ತು ಸಹೋದರಿಯರ ಭದ್ರತೆಗಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡುತ್ತೇನೆ' ಎಂದು ಹೇಳಿದರು.
ತೆಲಂಗಾಣದಲ್ಲಿ ಬಿಜೆಪಿಗೆ ಜನರ ಬೆಂಬಲ ನಿರಂತರವಾಗಿ ಬೆಳೆಯುತ್ತಿದೆ. ಮತದಾನದ ದಿನವು ತೆಲಂಗಾಣದಲ್ಲಿ ಬಿಜೆಪಿ ಅಲೆಯಿರಲಿದೆ. ಆದರೆ ಕಾಂಗ್ರೆಸ್ ಮತ್ತು ಬಿಆರ್‌ಎಸ್ ತೊಳೆದುಹೋಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷ ತೆಲಂಗಾಣವನ್ನು 'ಎಟಿಎಂ ರಾಜ್ಯ'ವನ್ನಾಗಿ ಮಾಡಿಕೊಂಡಿದ್ದು, ಲೂಟಿ ಮಾಡಿದ ಹಣ ದೆಹಲಿಗೆ ಹೋಗುತ್ತಿದೆ' ಎಂದು ಆರೋಪಿಸಿದರು.