ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮಹಿಳೆ ಸೇರಿದಂತೆ ಇಬ್ಬರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರಾಂಡುಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪುರಂಗೆಲ್ ಮತ್ತು ಗಾಂಪುರ್ ಗ್ರಾಮಗಳ ಸಮೀಪವಿರುವ ಕಾಡಿನಲ್ಲಿ ಇಂದು ಬೆಳಗ್ಗೆ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಪಡೆಗಳ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಂದುವರೆದಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಅವರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳ ಉಪಸ್ಥಿತಿಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ರಿಸರ್ವ್ ಗಾರ್ಡ್, ಬಸ್ತಾರ್ ಫೈಟರ್ಸ್, ರಾಜ್ಯ ಪೊಲೀಸರ ಎರಡೂ ಘಟಕಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ 111, 230 ಮತ್ತು 231 ನೇ ಬೆಟಾಲಿಯನ್‌ನ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಂಡಿನ ಚಕಮಕಿ ನಿಂತ ನಂತರ, ಘಟನಾ ಸ್ಥಳದಿಂದ ಪುರುಷ ಮತ್ತು ಮಹಿಳಾ ಮಾವೋವಾದಿಯ ಶವಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಎರಡು ಶಸ್ತ್ರಾಸ್ತ್ರಗಳು, ಕೆಲವು ಸ್ಫೋಟಕಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.