ಕುಂಬಳೆ: ಮಂಗಳೂರು-ಕೋಝಿಕ್ಕೋಡ್ ಭಾಗಕ್ಕೆ ಹೆಚ್ಚಿನ ರೈಲುಗಳು ಸಂಚರಿಸುತ್ತಿದ್ದು, ಕುಂಬಳೆಯಲ್ಲಿ ಕನಿಷ್ಠ ಒಂದು ರೈಲನ್ನಾದರೂ ನಿಲುಗಡೆ ಮಾಡುವಂತೆ ಪ್ರಯಾಣಿಕರು, ಪ್ರಯಾಣಿಕರ ಸಂಘ, ಸ್ವಯಂಸೇವಾ ಸಂಸ್ಥೆಗಳು, ವರ್ತಕರು ಆಗ್ರಹಿಸಿದ್ದಾರೆ. ಈ ತಿಂಗಳಲ್ಲಿ ವಂದೇ ಭಾರತ್ ಸೇರಿದಂತೆ 2 ರೈಲುಗಳು ಮಂಗಳೂರು-ಕೋಝಿಕ್ಕೋಡ್ ವಿಭಾಗದಲ್ಲಿ ಸಂಚಾರ ಆರಂಭಿಸಿವೆ. ಮಂಗಳೂರು-ರಾಮೇಶ್ವರಂ ರೈಲು ಸಂಚಾರವೂ ಆರಂಭವಾಗಿದೆ. ಸದರಿ ರೈಲು ಅಥವಾ ಇತರ ಯಾವುದಾದರೊಂದು ಎಕ್ಸ್‍ಪ್ರೆಸ್‍ಗೆ ಕುಂಬಳೆಯಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಯಶವಂತಪುರ-ಕಣ್ಣೂರು ಎಕ್ಸ್‍ಪ್ರೆಸ್ ಅನ್ನು ಈಗ ಕೋಝಿಕ್ಕೋಡ್‍ಗೆ ವಿಸ್ತರಿಸಲಾಗಿದೆ. ಈ ರೈಲಿಗೆ ಕುಂಬಳೆಯಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಪ್ರಯಾಣಿಕರು ಈಗಾಗಲೇ ಒತ್ತಾಯಿಸಿದ್ದಾರೆ. ಅದೇ ರೀತಿ ಪರಶುರಾಮ್, ಮಾವೇಲಿ ರೈಲುಗಳಿಗೆ ನಿಲುಗಡೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರಯಾಣಿಕರ ಸಂಘ, ಸ್ವಯಂ ಸೇವಾ ಸಂಸ್ಥೆಗಳು, ವರ್ತಕರು, ಸ್ಥಳೀಯರು, ವಿದ್ಯಾರ್ಥಿ ಸಂಘಟನೆಗಳು ಸಚಿವರು, ರೈಲ್ವೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಸ್ವಯಂಸೇವಾ ಸಂಸ್ಥೆಗಳು ದಶಕದಿಂದ ಈ ಬೇಡಿಕೆಯನ್ನು ಮುಂದಿಡುತ್ತಿದ್ದರೂ ರೈಲ್ವೆ ಇಲಾಖೆ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ.
ಕುಂಬಳೆ ರೈಲು ನಿಲ್ದಾಣವು ಸುಮಾರು 37 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದು ಪ್ರಯಾಣಿಕರಿಂದ ತುಂಬಿರುವ ಮತ್ತು ಉತ್ತಮ ಆದಾಯವನ್ನು ಹೊಂದಿರುವ ಜಿಲ್ಲೆಯ ನಿಲ್ದಾಣಗಳಲ್ಲಿ ಒಂದಾಗಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕುಂಬಳೆ ನಿಲ್ದಾಣ ಹಿಂದುಳಿದಿದೆ. ದೂರ ಪ್ರಯಾಣದÀ ರೈಲುಗಳಿಗೆ ನಿಲುಗಡೆ ಪಡೆಯಲು ಸಾಕಷ್ಟು ಒತ್ತಾಯ ವ್ಯಾಪಕಗೊಂಡಿದೆ. ಅಲ್ಲದೆ, ಮಳೆ, ಬಿಸಿಲಿನಿಂದ ಪ್ರಯಾಣಿಕರನ್ನು ರಕ್ಷಿಸಲು ಪ್ಲಾಟ್‍ಫಾರ್ಮ್‍ಗೆ ಹೆಚ್ಚಿನ ಮೇಲ್ಛಾವಣಿ ನಿರ್ಮಿಸುವುದು, ನಿಲ್ದಾಣದಲ್ಲಿ ಕಾಯ್ದಿರಿಸುವ ಸೌಲಭ್ಯ ಕಲ್ಪಿಸುವುದು, ಕುಂಬಳೆ ರೈಲು ನಿಲ್ದಾಣವನ್ನು ವಿಶಾಲವಾದ 'ಸ್ಯಾಟಲೈಟ್' ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸುವುದು ಮುಂತಾದ ಬೇಡಿಕೆಗಳನ್ನು ಪ್ರಯಾಣಿಕರು ಮುಂದಿಡುತ್ತಿದ್ದಾರೆ.
ಕುಂಬಳೆ ಪ್ರದೇಶ ಅತಿಹೆಚ್ಚು ಜನನಿಬಿಡ ಕೇಂದ್ರಗಳಲ್ಲೊಂದು. ಬದಿಯಡ್ಕ, ಪೆರ್ಲ, ಪುತ್ತಿಗೆ, ಸೀತಾಂಗೋಳಿ, ಕಳತ್ತೂರು, ಮೊಗ್ರಾಲ್ ಪುತ್ತೂರು ಮುಂತಾದ ಪ್ರದೇಶಗಳ ಪ್ರಧಾನ ಕೇಂದ್ರವಾಗಿ ಕುಂಬಳೆಗೆ ಹೆಚ್ಚೆಚ್ಚು ಜನರು ಆಶ್ರಿಸುತ್ತಿದ್ದು, ಕುಂಬಳೆ ರೈಲು ನಿಲ್ದಾಣ ಬಹುಜನ ಆಶ್ರಯಿಸಿರುವ ನಿಲ್ದಾಣವಾಗಿದ್ದು, ಮೇಲ್ದರ್ಜೆಗೇರಲೇಬೇಕಾದ ನಿಲ್ದಾಣವಾಗಿದೆ.