ನವದೆಹಲಿ: ಕೇಂದ್ರ ಸರ್ಕಾರದ ಬಗ್ಗೆ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ(ಪಿಐಬಿ) ಅಡಿಯಲ್ಲಿ 'ಫ್ಯಾಕ್ಟ್ ಚೆಕ್ ಘಟಕ' ಸ್ಥಾಪಿಸುವ ಕೇಂದ್ರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು, ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ಮಾರ್ಚ್ 20 ರಂದು ಫ್ಯಾಕ್ಟ್ ಚೆಕ್ ಯುನಿಟ್ ಸ್ಥಾಪಿಸಲು ಅಧಿಸೂಚನೆ ಹೊರಡಿಸಿತ್ತು.
ಕೇಂದ್ರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, 'ಫ್ಯಾಕ್ಟ್ ಚೆಕ್ ಘಟಕ'ಕ್ಕೆ "ಮಧ್ಯಂತರ ತಡೆ ಕೋರಿದ್ದ ಅರ್ಜಿಯನ್ನು ಮಾರ್ಚ್ 11 ರಂದು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ನಂತರ ಮಾರ್ಚ್ 20, 2024 ರಂದು ಹೊರಡಿಸಿದ ಕೇಂದ್ರದ ಅಧಿಸೂಚನೆಯನ್ನು ನಾವು ತಡೆಹಿಡಿಯಬೇಕಾಗಿದೆ ಎಂದು ಹೇಳಿದೆ.
"ಹೈಕೋರ್ಟ್ ಮುಂದೆ ಸಂವಿಧಾನದ 19 (1) (a)ಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳಿವೆ. 3(1)(b)(5)ರ ಸಿಂಧುತ್ವದ ಸವಾಲು ಗಂಭೀರವಾದ ಸಾಂವಿಧಾನಿಕ ಪ್ರಶ್ನೆ ಮತ್ತು ಪರಿಣಾಮವನ್ನು ಒಳಗೊಂಡಿರುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ನಿಯಮವನ್ನು ಹೈಕೋರ್ಟ್ ವಿಶ್ಲೇಷಿಸಬೇಕಾಗಿದೆ ” ಎಂದು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.
ಫ್ಯಾಕ್ಟ್ ಚೆಕ್ ಘಟಕ, ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರ ಮತ್ತು ಅದರ ಏಜೆನ್ಸಿಗಳಿಗೆ ಸಂಬಂಧಿಸಿದ ಸುಳ್ಳು ಮಾಹಿತಿಗಳನ್ನು ಪತ್ತೆ ಹಚ್ಚುವ ಅಧಿಕಾರವನ್ನು ಹೊಂದಿರುವ ಶಾಸನಬದ್ಧ ಸಂಸ್ಥೆಯಾಗಿದೆ.
ಏಪ್ರಿಲ್ 2023ರಲ್ಲಿ ಜಾರಿಗೆ ಬಂದ ತಿದ್ದುಪಡಿ ಮಾಡಲಾದ ಐಟಿ ನಿಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿನ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಕೇಂದ್ರದ ವ್ಯವಹಾರಕ್ಕೆ ಸಂಬಂಧಿಸಿದ ತಪ್ಪು ಮಾಹಿತಿಗಳನ್ನು ಪತ್ತೆ ಹಚ್ಚಲು ಸತ್ಯ ಪರಿಶೀಲನೆ ಘಟಕ ಸ್ಥಾಪಿಸುವ ಅಧಿಕಾರ ನೀಡುತ್ತದೆ.
ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಬಾಂಬೆ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರು, ಈ ಹಿಂದೆ ಭಿನ್ನ ತೀರ್ಪು ನೀಡಿದ್ದರು. ಒಬ್ಬರು ನ್ಯಾಯಾಧೀಶರು ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದರೆ, ಮತ್ತೊಬ್ಬರು ತಡೆಯಾಜ್ಞೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಭಜಿತ ತೀರ್ಪಿನ ಕುರಿತು ಅಭಿಪ್ರಾಯ ನೀಡಲು ನಿಯೋಜಿತವಾಗಿರುವ ಮೂರನೇ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ ಎಸ್ ಚಂದೂರ್ಕರ್ ಅವರು ತಮ್ಮ ಅಂತಿಮ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ.
ವಿಭಾಗೀಯ ಪೀಠವು ಮಾರ್ಚ್ 13 ರಂದು ಔಪಚಾರಿಕವಾಗಿ 2:1 ಬಹುಮತದೊಂದಿಗೆ ಫ್ಯಾಕ್ಟ್ ಚೆಕ್ ಘಟಕದ ಅಧಿಸೂಚನೆಯನ್ನು ತಡೆಹಿಡಿಯುವುದಿಲ್ಲ ಎಂದು ಘೋಷಿಸಿತ್ತು.