ಇತ್ತೀಚೆಗೆ ಎಸ್‌ಬಿಐ ಬ್ಯಾಂಕ್ ಡೆಬಿಟ್ ಬಳಕೆದಾರರಿಗೆ ಶುಲ್ಕ ಹೆಚ್ಚಿಸಿ ಶಾಕ್ ನೀಡಿದೆ.
ಸಾರ್ವಜನಿಕ ವಲಯದ ಪ್ರಸಿದ್ಧ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಡೆಬಿಟ್ ಕಾರ್ಡ್ ಬಳಕೆದಾರರಿಗೆ ಕೆಟ್ಟ ಸುದ್ದಿ ನೀಡಿದೆ. ನಿರ್ವಹಣೆ ಶುಲ್ಕಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಡೆಬಿಟ್ ಕಾರ್ಡ್‌ಗಳ ಸೇವಾ ಶುಲ್ಕವನ್ನು ಹೆಚ್ಚಿಸಲಾಗುವುದು. ಹೊಸ ಡೆಬಿಟ್ ಕಾರ್ಡ್ ಸೇವಾ ಶುಲ್ಕಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಎಸ್‌ಬಿಐ ತಿಳಿಸಿದೆ.
ಆದರೆ ಎಲ್ಲಾ ಕಾರ್ಡ್‌ಗಳಿಗೆ ಒಂದೇ ಬೆಲೆಯನ್ನು ಹೊಂದುವ ಬದಲು ವಿಭಿನ್ನ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಸಿಲ್ವರ್, ಗ್ಲೋಬಲ್, ಕ್ಲಾಸಿಕ್ ಮತ್ತು ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕವನ್ನು 200ರೂ.ಗೆ ಹೆಚ್ಚಿಸಲಾಗಿದೆ. ಈ ಮೊದಲು ಈ ಶುಲ್ಕಗಳು 125 ರೂ.ಗಳಾಗಿದ್ದು, ಅವುಗಳನ್ನು 200 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ 75 ರೂಪಾಯಿ ಏರಿಕೆಯಾಗಿದೆ.
ಅದೇ ರೀತಿ ಯುವ, ಗೋಲ್ಡ್, ಕಾಂಬೋ ಡೆಬಿಟ್ ಕಾರ್ಡ್ ಮತ್ತು ಮೈ ಕಾರ್ಡ್ ನಿರ್ವಹಣೆ ಶುಲ್ಕವನ್ನು 175ರೂ.ನಿದ 250ರೂ.ಗೆ ಹೆಚ್ಚಿಸಲಾಗಿದೆ.
ಇನ್ನು ಪ್ಲಾಟಿನಂ ಡೆಬಿಟ್ ಕಾರ್ಡ್‌ನ ಶುಲ್ಕವನ್ನು 325ರೂ.ಗೆ ಹೆಚ್ಚಿಸಿದೆ. ಈ ಹಿಂದೆ ಅದರ ಸೇವಾ ಶುಲ್ಕ 250 ರೂ. ಇತ್ತು. ಇದು ಸಹ 75ರೂ. ಹೆಚ್ಚಾಗಿದೆ. ಪ್ಲಾಟಿನಂ ಬ್ಯುಸಿನೆಸ್ ಕಾರ್ಡ್ ಶುಲ್ಕ 350ರೂ.ನಿಂದ 425 ಕ್ಕೆ ಏರಿಕೆಯಾಗಿದೆ. ಈ ಎಲ್ಲ ಶುಲ್ಕಗಳ ಮೇಲೆ ಹೆಚ್ಚುವರಿಯಾಗಿ ಜಿಎಸ್ಟಿ ಬೇರೆ ಇರಲಿದೆ.
ಹೆಚ್ಚಿದ ಡೆಬಿಟ್ ಕಾರ್ಡ್ ಸೇವಾ ಶುಲ್ಕಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಅಲ್ಲದೆ, ಈ ಹಿಂದೆ ಇದ್ದಂತೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ರೆಂಟ್ ಪಾವತಿಸುವಾಗ ಇದ್ದ ರಿವಾರ್ಡ್ ಪಾಯಿಂಟ್‌ಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ. ಎಸ್‌ಬಿಐ ತೆಗೆದುಕೊಂಡ ಈ ನಿರ್ಧಾರ ಇತರೆ ಬ್ಯಾಂಕ್ಗಳೂ ಅನುಸರಿಸಲಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.