ವಾರಾಣಸಿ : ಉತ್ತರಪ್ರದೇಶದ ವಾರಾಣಸಿ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಸ್ಥಳೀಯ ಅಭ್ಯರ್ಥಿಯಲ್ಲದಿದ್ದರೂ ತಮ್ಮ ವರ್ಚಸ್ಸಿನಿಂದಲೇಇಲ್ಲಿ ಗೆಲ್ಲುತ್ತಿರುವ 73 ವರ್ಷದ ಮೋದಿ ಅವರಿಗೆ ಈ ಬಾರಿಯೂ ಜಯಗಳಿಸುವ ಆತ್ಮವಿಶ್ವಾಸವಿದೆ.
2001ರಿಂದ 2014ರವರೆಗೆ ಗುಜರಾತ್‌ನ ಮುಖ್ಯಮುಂತ್ರಿಯಾಗಿದ್ದ ಅವರು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಲು ಆಯ್ದುಕೊಂಡಿರುವ ಕ್ಷೇತ್ರವೇ ವಾರಾಣಸಿ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ 2002ರಲ್ಲಿ ನಡೆದಿದ್ದ ಗಲಭೆಯ ಬಳಿಕ ಮೋದಿ ಅವರ ವಿರುದ್ಧ ತೀವ್ರ ಟೀಕೆಗಳು ಕೇಳಿ ಬಂದಿದ್ದವು. ಆದರೆ ವಾರಾಣಸಿಯ ಮತದಾರರು ಅದನ್ನು ಗಂಭೀರ
ವಾಗಿ ಪರಿಗಣಿಸಿಲ್ಲ. 2014ರಲ್ಲಿ ಎಎಪಿಯ ಅರವಿಂದ ಕೇಜ್ರಿವಾಲ್ ಅವರು ಇಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು.
ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರಾಳಿಯಾಗಿ, ಕಾಂಗ್ರೆಸ್ ಈ ಬಾರಿಯೂ ಅಜಯ್ ರಾಯ್ ಅವರನ್ನು ಅಖಾಡಕ್ಕಿಳಿಸಿದೆ. 54 ವರ್ಷದ ಅಜಯ್, ಪಕ್ಷದ ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷರೂ ಹೌದು. ಅದಕ್ಕಿಂತಲೂ ಹೆಚ್ಚಾಗಿ ಅವರು ಈ ಕ್ಷೇತ್ರದಲ್ಲಿ ಸ್ಥಳೀಯವಾಗಿ ಪ್ರಭಾವವಿರುವ ರಾಜಕಾರಣಿ ಎಂಬುದು ಗಮನಾರ್ಹ. ಬಿಜೆಪಿಯ ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ಅವರು ಕೋಲಸ್ಲಾ ಕ್ಷೇತ್ರದಿಂದ ವಿಧಾನಸಭೆಗೆ ಮೂರು ಬಾರಿ ಬಿಜೆಪಿಯಿಂದ, ಒಮ್ಮೆ ಪಕ್ಷೇತರರಾಗಿ ಹಾಗೂ ಪಿಂದ್ರಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ
ಮುನಿಸಿಕೊಂಡಿದ್ದ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡು, 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.