ಬರಸಾತ್ : ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮವು 'ಅಸಾಂವಿಧಾನಿಕ ಮತ್ತು ಪಕ್ಷಪಾತದಿಂದ ಕೂಡಿದೆ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಹಬ್ರಾದಲ್ಲಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಕಾಯ್ದೆಯಡಿ ಪೌರತ್ವವನ್ನು ಕೋರಿ ಅರ್ಜಿ ಸಲ್ಲಿಸುವ ಮೊದಲು ಜನರು ಹಲವು ಬಾರಿ ಚಿಂತನೆ ನಡೆಸಬೇಕು' ಎಂದು ಸಲಹೆ ನೀಡಿದ್ದಾರೆ.
'ಅಧಿಸೂಚನೆ ಹೊರಡಿಸಿರುವ ಸಿಇಇ ನಿಯಮಗಳಿಗೆ ಕಾನೂನು ಮಾನ್ಯತೆ ಇದೆಯೇ ಎಂಬ ಬಗ್ಗೆಯೇ ನನಗೆ ಅನುಮಾನಗಳಿವೆ. ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಇದು, ಸಂವಿಧಾನದ ಮೂಲಭೂತ ಹಕ್ಕಾಗಿರುವ ಸಮಾನತೆಗೆ ವಿರುದ್ಧವಾಗಿದೆ' ಎಂದು ಟೀಕಿಸಿದರು.
'ಕಾಯ್ದೆಯ ಅನುಷ್ಠಾನ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಸಂಚು. ಪೌರತ್ವ ಕೋರಿ ಅರ್ಜಿ ಸಲ್ಲಿಸಿದ ಕೂಡಲೇ ಅವರು ಇಲ್ಲಿನ ಅಕ್ರಮ ನಿವಾಸಿಯಾಗುತ್ತಾರೆ. ಅವರನ್ನು ಕೂಡಲೇ ನಿರಾಶ್ರಿತರ ಶಿಬಿರಗಳಿಗೆ ಒಯ್ಯಲಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ಯಾರಿಗಾದರೂ ಪೌರತ್ವದ ಹಕ್ಕುಗಳು ದೊರೆತರೆ ನನಗೂ ಸಂತೋಷವಾಗಲಿದೆ. ಅಂತಹ ಹಕ್ಕಿನಿಂದ ಯಾರಾದರೂ ವಂಚಿತರಾಗಿದ್ವರೆ ನಾನೇ ಆಶ್ರಯ ನೀಡುತ್ತೇನೆ. ಆದರೆ ಯಾರನ್ನಾದರೂ 'ಹೊರಗೆ ಕಳುಹಿಸಲು' ನಾನು ಅವಕಾಶ ನೀಡುವುದಿಲ್ಲ' ಎಂದು ಹೇಳಿದರು.
ಸಿಎಎಗೂ ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್‌ಆರ್‌ಸಿ) ಸಂಬಂಧವಿದೆ. ಈಗಾಗಲೇ ಪೌರತ್ವ ಪಡೆದಿರುವ ಮುಸಲ್ಮಾನ ವಲಸಿಗರನ್ನು ಅಕ್ರಮವಾಗಿ ನೆಲೆಸಿರುವ ನಿವಾಸಿಗಳು ಎಂದು ಘೋಷಿಸಲಾಗುತ್ತದೆ. ಎನ್‌ಆರ್‌ಸಿ ಅನ್ವಯ ಅವರು ತೊಂದರೆ ಎದುರಿಸಲಿದ್ದಾರೆ ಎಂದರು.
ಜಾತ್ಯತೀತ ತತ್ವಗಳ ಸ್ಪಷ್ಟ ಉಲ್ಲಂಘನೆ: ಸಿಪಿಎಂ
ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿರುವುದು ಸಂವಿಧಾನದ ಜಾತ್ಯತೀತ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಪಿಎಂ ಪಕ್ಷ ಅಭಿಪ್ರಾಯಪಟ್ಟಿದೆ. ಸಿಎಎ ಜಾರಿಯನ್ನು ಬಲವಾಗಿ ವಿರೋಧಿಸಿದೆ.
ಈ ಕುರಿತು ಹೇಳಿಕೆಯಲ್ಲಿ ಪಕ್ಷವು, 'ಸಿಎಎ ನಿಯಮಗಳಿಗೂ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೂ ನೇರವಾದ ಸಂಬಂಧವಿದೆ. ಮುಸಲ್ಮಾನರನ್ನು ಗುರಿಯಾಗಿಸಿಯೇ ಈಗ ಅಧಿಸೂಚನೆ ಹೊರಡಿಸಲಾಗಿದೆ' ಎಂದು ಆರೋಪಿಸಿದೆ.
ಸೈಯದ್ ಶಾಹನವಾಜ್ ಹುಸೇನ್, ಬಿಜೆಪಿ ನಾಯಕಸಿಎಎ ಕುರಿತ ವದಂತಿಗಳಿಂದ ವಿಚಲಿತರಾಗಬೇಡಿ. ಇದರ ಉದ್ದೇಶ ಬಾಂಗ್ಲಾದೇಶ ಆಫ್ಗಾನಿಸ್ತಾನ ಮತ್ತು ಪಾಕಿಸ್ತಾನದಿಂದ ನಿರಾಶ್ರಿತರಿಗೆ ಪೌರತ್ವ ನೀಡುವುದೇ ಆಗಿದೆ.ಸಿಎಎ ಅನುಷ್ಠಾನವನ್ನು ಸಿಪಿಎಂ ಪಾಲಿಟ್ ಬ್ಯೂರೊ ತೀವ್ರವಾಗಿ ಖಂಡಿಸಲಿದೆ. ವ್ಯಕ್ತಿಯ ಧರ್ಮ ಮತ್ತು ಪೌರತ್ವಕ್ಕೂ ಸಂಪರ್ಕ ಕಲ್ಪಿಸುವುದು ಸರಿಯಾದ ಕ್ರಮವಲ್ಲ. ಸಿಎಎ ನಿಯಮಗಳು ಮುಸಲ್ಮಾನರ ಬಗ್ಗೆ ಪಕ್ಷಪಾತ ನಿಲುವು ಹೊಂದಿವೆ ಎಂದು ಪಕ್ಷ ಟೀಕಿಸಿದೆ.
'ಪೌರತ್ವವನ್ನು ನೀಡಲು ಜನರನ್ನು ಗುರುತಿಸುವ ಪ್ರಕ್ರಿಯೆಯಿಂದ ಆಯಾ ರಾಜ್ಯ ಸರ್ಕಾರಗಳನ್ನು ಹೊರಗಿಡಲಾಗಿದೆ. ಸಿಎಎ ವಿರೋಧಿಸುವ ರಾಜ್ಯಗಳನ್ನು ಕೈಬಿಡುವುದೇ ಇದರ ಉದ್ದೇಶವಾಗಿತ್ತು. ಮುಖ್ಯವಾಗಿ ಸಿಎಎ ಜಾರಿಗೊಳಿಸಿದ ಸಂದರ್ಭ ಶಂಕಾಸ್ಪದವಾಗಿದೆ' ಎಂದರು.
ಸಿಎಎ ಜಾರಿಯನ್ನು ತೀವ್ರವಾಗಿ ವಿರೋಧಿಸುವ ಪಕ್ಷ, ಈ ಕಾಯ್ದೆಯ ರದ್ದತಿಗಾಗಿ ಹೋರಾಟವನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ಬಿಜೆಪಿಯ ಹೊಸ ಚುನಾವಣಾ ಅಸ್ತ್ರ: ಒಮರ್ ಅಬ್ದುಲ್ಲಾ
ಶ್ರೀನಗರ ಸಿಎಎ ನಿಯಮಗಳನ್ನು ಅಧಿಸೂಚನೆ ಹೊರಡಿಸುವ ಮೂಲಕ ಬಿಜೆಪಿಯು ಮುಸಲ್ಮಾನರಿಗೆ ರಂಜಾನ್ ಉಡುಗೊರೆ ನೀಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಘೋಷಣೆಗೂ ಮೊದಲು ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಇದು, ಸ್ವತಃ ಬಿಜೆಪಿಗೆ 400 ಸ್ಥಾನ ಗೆಲ್ಲುವ ವಿಶ್ವಾಸ ಇಲ್ಲ ಎಂಬುದನ್ನು ಬಿಂಬಿಸುತ್ತಿದೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಟೀಕಿಸಿದರು.
ಅನುರಾಗ್ ಠಾಕೂರ್, ಕೇಂದ್ರ ಸಚಿವಸಿಎಎ ವಿರೋಧಿಸುವ ಮೂಲಕ ವಿರೋಧಪಕ್ಷಗಳು ನೆರೆ ರಾಷ್ಟ್ರಗಳಲ್ಲಿದ್ದ ಧಾರ್ಮಿಕ ಅಲ್ಪಸಂಖ್ಯಾತರ ಭಾರತೀಯ ಪೌರತ್ವ ಪಡೆಯುವ ಹಕ್ಕು ಕಸಿದುಕೊಳ್ಳುತ್ತಿವೆ. ಪ್ರತಿಪಕ್ಷದವರಲ್ಲಿ ಮಾನವೀಯತೆ ಸತ್ತುಹೋಗಿದೆಯೇ?.ಕಾಯ್ದೆಗೆ 2019ರಲ್ಲಿಯೇ ಅನುಮೋದನೆ ದೊರೆತಿದೆ. ಆದರೆ, ಈಗ ಚುನಾವಣೆ ಘೋಷಣೆಗೆ ಮೊದಲು ಅಧಿಸೂಚನೆ ಹೊರಡಿಸಲಾಗಿದೆ. ರಾಮಮಂದಿರ ನಿರ್ಮಾಣದ ಬಳಿಕ ತಾವು ಸೋಲುವುದಿಲ್ಲ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದರು. ಆದರೆ, ಅವರ ಬಲವೀಗ ಕ್ಷೀಣಿಸಿದೆ. ಹೀಗಾಗಿ, ಬಿಜೆಪಿಯು ಹೊಸ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ ಎಂದು ಹೇಳಿದರು.
'ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಒಂದು ವಿಷಯವಾಗಿ ಧರ್ಮವನ್ನು ಬಳಸಲು ಬಿಜೆಪಿ ಉದ್ದೇಶಿಸಿರುವುದು ಸ್ಪಷ್ಟವಾಗಿದೆ. ಬಿಜೆಪಿ ಮುಸ್ಲಿಮರನ್ನು ವಿರೋಧಿಸುವುದು ಹೊಸತಲ್ಲ, ಸಿಎಎ ಮೂಲಕವೂ ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡಿದೆ' ಎಂದರು.
ಭರವಸೆಯ ಕಿರಣ: ಪಾಕ್‌ನ ಹಿಂದೂ ನಿರಾಶ್ರಿತರು
ಸಿಎಎ ನಿಯಮಗಳ ಕುರಿತು ಸರ್ಕಾರ ಈಗ ಅಧಿಸೂಚನೆ ಹೊರಡಿಸಿರುವುದು ನಮಗೆ ಭದ್ರತಾ ಭಾವನೆ ನೀಡಿದೆ ಎಂದು ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ವಲಸೆ ಬಂದಾಗಿನಿಂದಲೂ ನಾವು ಗುಡಿಸಲು ಮನೆ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದೇವೆ. ಉರುವಲು ಬಳಸಿ ಅಡುಗೆ ಮಾಡುತ್ತಿದ್ದೇವೆ. ಸಿಎಎ ನಮಗೆ ಭರವಸೆಯ ಆಶಾಕಿರಣವಾಗಿದೆ ಎಂದು ಹೇಳಿದ್ದಾರೆ.
ನಾನು ಪಾಕಿಸ್ತಾನದಿಂದ 2011ರಲ್ಲಿ ವಲಸೆ ಬಂದಿದ್ದೇನೆ. ವಿದ್ಯುತ್ ಸಂಪರ್ಕ ಸೇರಿದಂತೆ ನಮಗೆ ಮೂಲಸೌಕರ್ಯವೂ ದೊರೆತಿಲ್ಲ ಎಂದು ಮಜ್ನು ಕ ಟಿಲ್ಲಾ ನಿರಾಶ್ರಿತ ಸಮುದಾಯದ ನಿವಾಸಿ ಧರ್ಮವೀರ್ ಸೋಳಂಕಿ ಪ್ರತಿಕ್ರಿಯಿಸಿದರು.
ಈಗ ಸಿಎಎ ಅಧಿಸೂಚನೆ ಹೊರಬಿದಿದ್ದಿದೆ. ನಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗುವ ಭರವಸೆ ಮೂಡಿದೆ. ಕಳೆದ 13 ವರ್ಷಗಳಲ್ಲಿ ಕೆಲವರಿಗೆ ಮಿನಿ ಎಲ್‌ಪಿಜಿ ಸಿಲಿಂಡರ್ ದೊರೆತಿರಬಹುದು. ಹಲವರು ಅಡುಗೆಗೆ ಉರುವಲು ಬಳಸುತ್ತಿದ್ದೇವೆ ಎಂದು ಸೋನಾದಾಸ್ ಹೇಳಿದರು.
ಬಹುಶಃ ನಮ್ಮ ಕಷ್ಟದ ದಿನಗಳು ಅಂತ್ಯಗೊಳ್ಳುತ್ತಿದ್ದು ಒಳ್ಳೆಯ ದಿನಗಳು ಶೀಘ್ರವೇ ಬರಲಿದೆ ಎಂದು ಕನ್ಹಯ್ಯಾ ಪ್ರತಿಕ್ರಿಯಿಸಿದರು.
ಸಿಎಎ ಜಾರಿಗೆ ಅವಕಾಶನೀಡೆವು: ತಮಿಳುನಾಡು ಸಿಎಂ
'ಸಿಎಎ ಜನರನ್ನು ವಿಭಜಿಸಲಿದೆ ಮತ್ತು ಅಪ್ರಯೋಜನಕಾರಿ' ಎಂದು ಬಣ್ಣಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಅಧಿಸೂಚನೆ ಕುರಿತು ಬಿಜೆಪಿ ವಿರುದ್ಧ ಹರಿಹಾಯ್ದ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತರಾತುರಿಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ. ದೇಶದ ಏಕತೆಗೆ ಧಕ್ಕೆ ತರುವ ಯಾವುದೇ ಕಾಯ್ದೆಗೆ ಸರ್ಕಾರ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಸಿಎಎ ಜಾತ್ಯತೀತತೆ ಅಲ್ಪಸಂಖ್ಯಾತರು ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರ ವಿರುದ್ಧವಾಗಿದೆ ಎಂದು ಹೇಳಿದರು.