ಕಾಸರಗೋಡು: ರಾಜ್ಯ ಸರ್ಕಾರ ಮೂರು ವರ್ಷದ ಕ್ಷಾಮಭತ್ತೆ ಸೇರಿಸಿ ಜಾರಿಗೊಳಿಸಿರುವ ಶೇ. 2ಕ್ಷಾಮಭತ್ತೆಯಲ್ಲಿ 39ತಿಂಗಳ ಬಾಕಿ ಮೊತ್ತ ಮಂಜೂರು ಮಾಡದೆ ಕೇರಳ ಸರ್ಕಾರ ಹೊರಡಿಸಿರುವ ಆದೇಶ ಪ್ರತಿಯನ್ನು ಸುಟ್ಟುಹಾಕುವ ಮೂಲಕ ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‍ಟಿಎ)ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.
ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರ ಸೌಲಭ್ಯಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿರುವ ಸರ್ಕಾರದ ಆಡಳಿತವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ನೌಕರರನ್ನು ಅವಮಾನಿಸುವ ಇಂತಹ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಕೆಪಿಎಸ್‍ಟಿಎ ವತಿಯಿಂದ ರಾಜ್ಯಾದ್ಯಂತ ಉಪಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕಾಸರಗೋಡು ಜಿಲ್ಲೆಯ ಎಲ್ಲಾ 7 ಉಪಜಿಲ್ಲಾ ಕೇಂದ್ರಗಳಲ್ಲಿ ಉಪಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಕ್ಷಾಮಭತ್ತೆ ಆದೇಶ ಪ್ರತಿ ಸುಟ್ಟುಹಾಕುವ ಪ್ರತಿಭಟನೆ ನಡೆಯಿತು. ಮಂಜೇಶ್ವರ ಉಪಜಿಲ್ಲ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಕಾಸರಗೋಡು ಕಂದಾಯ ಜಿಲ್ಲಾ ಕಾರ್ಯದರ್ಶಿ ಪಿ.ಟಿ. ಬೆನ್ನಿ, ಕುಂಬಳೆ ಉಪಜಿಲ್ಲೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಶಾಂತ್ ಕಾನತ್ತೂರು, ಕಾಸರಗೋಡು ಉಪಜಿಲ್ಲಾ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಜಿಲ್ಲಾಧ್ಯಕ್ಷ ಕೆ.ವಿ. ವಾಸುದೇವನ್ ನಂಬೂತಿರಿ ಉದ್ಘಾಟಿಸಿದರು.
ಬೇಕಲ ಉಪಜಿಲ್ಲೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಅನಿಲಕುಮಾರ್, ಹೊಜದುರ್ಗ ಉಪಜಿಲ್ಲೆಯಲ್ಲಿ ಕೆ. ಶ್ರೀನಿವಾಸನ್, ಚೆರುವತ್ತೂರು ಉಪಜಿಲ್ಲೆಯಲ್ಲಿಪಿ. ಶಶಿಧರನ್, ಚಿತ್ತಾರಿಕಲ್ ಉಪಜಿಲ್ಲೆಯಲ್ಲಿ ರಾಜ್ಯ ಕಾರ್ಯದರ್ಶಿ ಜಿ.ಕೆ.ಗಿರೀಶನ್ ಧರಣಿ ಉದ್ಘಾಟಿಸಿದರು. ಉಪಜಿಲ್ಲಾ ಅಧ್ಯಕ್ಷರಾದ ಜಿಜೋ ಪಿ. ಜೋಸೆಫ್, ಕೆ.ಕೆ. ಸಜಿತ್, ಟಿ.ಕೆ. ರಶೀದ್, ಎಸ್.ಪಿ. ಕೇಶವನ್, ಕೆ.ಎ. ಜಾನ್, ಇ. ರಾಮಕೃಷ್ಣನ್, ಎಂ. ಇಸ್ಮಾಯಿಲ್ ವಿವಿಧ ಉಪಜಿಲ್ಲೆಗಳಲ್ಲಿ ನಡೆದ ಧರಣಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು.