ನವದೆಹಲಿ: ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರೂಪಿಸಲು ಬಿಜೆಪಿಯು 27 ಸದಸ್ಯರ ಸಮಿತಿಯನ್ನು ಶನಿವಾರ ಪ್ರಕಟಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯಲ್ಲಿ ಕೇಂದ್ರದ ಹಲವು ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇದ್ದಾರೆ.
ನವದೆಹಲಿ: ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರೂಪಿಸಲು ಬಿಜೆಪಿಯು 27 ಸದಸ್ಯರ ಸಮಿತಿಯನ್ನು ಶನಿವಾರ ಪ್ರಕಟಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಮಿತಿಯಲ್ಲಿ ಕೇಂದ್ರದ ಹಲವು ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಕ್ರಮವಾಗಿ ಸಂಚಾಲಕಿ ಮತ್ತು ಉಪಸಂಚಾಲರಾಗಿ ನೇಮಕ ಮಾಡಲಾಗಿದೆ.
ರಾಜನಾಥ್ ಸಿಂಗ್ ಅವರು 2019ರ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಪ್ರಣಾಳಿಕೆ ಸಮಿತಿಯ ನೇತೃತ್ವ ವಹಿಸಿದ್ದರು. ಅಂದು ಸಮಿತಿಯಲ್ಲಿದ್ದ ಹಲವು ಮಂದಿ ಈ ಬಾರಿಯೂ ಸ್ಥಾನ ಪಡೆದುಕೊಂಡಿದ್ದಾರೆ.
ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಭೂಪೇಂದರ್ ಯಾದವ್, ಕಿರಣ್ ರಿಜಿಜು, ಅರ್ಜುನ್ ಮುಂಡಾ, ಅರ್ಜುನ್ ರಾಮ್ ಮೇಘವಾಲ್, ಸ್ಮೃತಿ ಇರಾನಿ ಮತ್ತು ರಾಜೀವ್ ಚಂದ್ರಶೇಖರ್ ಅವರು ಸಮಿತಿಯಲ್ಲಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದರ್ ಪಟೇಲ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಮಿತಿಯಲ್ಲಿರುವ ಮುಖ್ಯಮಂತ್ರಿಗಳಾಗಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಸಮಿತಿಯಲ್ಲಿಲ್ಲದ ಕೆಲವು ಹಿರಿಯ ನಾಯಕರಿಗೆ ಚುನಾವಣೆಗೆ ಸಂಬಂಧಿಸಿದ ಇತರ ಸಂಘಟನಾತ್ಮಕ ಚಟುವಟಿಕೆಯ ಜವಾಬ್ದಾರಿ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ತಮ್ಮ ಮೂರನೇ ಅವಧಿಯು ಕೆಲವೊಂದು ದೊಡ್ಡ ನಿರ್ಧಾರಗಳಿಂದ ಕೂಡಿರಲಿದೆ ಎಂದು ಪ್ರಧಾನಿ ಮೋದಿ ಅವರು ಆಗಿಂದಾಗ್ಗೆ ಹೇಳುತ್ತಾ ಬಂದಿರುವುದರಿಂದ, ಬಿಜೆಪಿ ಪ್ರಣಾಳಿಕೆಯ ಬಗ್ಗೆ ಕುತೂಹಲ ಹೆಚ್ಚಿದೆ.