ಕಾಸರಗೋಡು: ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿತಿಯ ಮೈಲ್‍ಪಾರೆ, ಮಜಲ್, ಉಜಿರಕರ ರಸ್ತೆಯ ಶಿಥಿಲಾವಸ್ಥೆ ಬಗೆಹರಿಸುವಂತೆ ಒತ್ತಾಯಿಸಿ ಮೊಗ್ರಾಲ್‍ಪುತ್ತೂರು ಜನಪರ ಹೋರಾಟ ಸಮಿತಿ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚೇಂಬರ್‍ನೊಳಗೆ ದಿಗ್ಬಂಧನ ಪ್ರತಿಭಟನೆ ನಡೆಸಿತು. ಸಮಿತಿ ಸದಸ್ಯರು ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3ರ ವರೆಗೂ ಮುಷ್ಕರ ಮುಂದುವರಿದಿತ್ತು.
ಕಳೆದ 10 ವರ್ಷಗಳಿಂದ ಮೈಲ್‍ಪಾರ ಮತ್ತು ಉಜಿರಕರ ರಸ್ತೆಗಳು ಹದಗೆಟ್ಟಿದ್ದು, ಆಟೋ ಚಾಲಕರು ಸೇರಿದಂತೆ ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ನಿರಂತರ ಧರಣಿ ನಡೆಸುತ್ತಿದ್ದರೂ ರಸ್ತೆ ಕಾಮಗಾರಿ ಆರಂಭವಾಗದಿರುವುದನ್ನು ವಿರೋಧಿಸಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಳೆದ ಹಲವು ವರ್ಷಗಳಿಂದ ನೀಡುತ್ತಾ ಬಂದಿರುವ ಮನವಿ ಬಗ್ಗೆ ಸಂಬಂಧಪಟ್ಟವರು ನಿರ್ಲಕ್ಷ್ಯವಹಿಸುತ್ತಾ ಬಂದಿರುವುದರಿಂದ ದಿಗ್ಬಂಧನ ಅನಿವಾರ್ಯವಾಗಿದೆ. ರಸ್ತೆ ಶೋಚನೀಯಾವಸ್ಥೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಅಧಿಕಾರಿಗಳ ಜತೆ ದೀರ್ಘ ಕಾಲ ಚರ್ಚೆ ಮುಂದುವರಿಯುತ್ತಿದ್ದಂತೆ, ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ಮಧ್ಯೆ ವಾಗ್ವಾದವೂ ನಡೆಯಿತು. ಮಾ. 18ರ ನಂತರ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂಬ ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಧರಣಿ ತಾತ್ಕಾಲಿಕವಾಗಿ ಕೈಬಿಡಲಾಯಿತು. ಕಾಮಗಾರಿ ಆರಂಭಿಸಿ, ರಸ್ತೆಯ ಶೋಚನೀಯಾವಸ್ಥೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಧರಣಿಯ ಸ್ವರೂಪ ಬದಲಾಗಲಿದೆ ಎಂದು ಹೋರಾಟ ಸಮಿತಿ ಸದಸ್ಯರು ತಿಳಿಸಿದರು. ಪ್ರಮೀಳಾ ಮಜಲ್, ಗೀರೀಶ್ ಮಜಲ್, ರಿಯಾಸ್ ಮಜಲ್, ಸಲೀಂ ಸಂದೇಶಂ, ಅನ್ವರ್ ಕಲ್ಲಂಗೈ, ರಹೀಮ್ ಮಜಲ್ ದಿಗ್ಬಂಧನಕ್ಕೆ ನೇತೃತ್ವ ನೀಡಿದ್ದರು.