ನವದೆಹಲಿ: ಲೋಕಸಭೆ ಚುನಾವಣೆಗೆ ತಿಂಗಳು ಬಾಕಿ ಇರುವಾಗ ಸಿಎಎ ಜಾರಿ ಮಾಡುವ ಮೂಲಕ ಬಿಜೆಪಿ ರಾಜಕೀಯ ಧ್ರುವೀಕರಣಕ್ಕೆ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸಿಎಎ ಜಾರಿ ಮಾಡುವುದಿಲ್ಲ ಎಂದು ಹೇಳಿವೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನಕ್ಕೆ ವಿರುದ್ಧ. ಹಾಗಾಗಿ, ನಾವು ಸಹ ಸಿಎಎ ಅನ್ನು ವಿರೋಧಿಸುತ್ತೇವೆ ಎಂದು ರಮೇಶ್ ಹೇಳಿದರು. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲೂ ದಾವೆ ಹೂಡಲಾಗಿದೆ ಎಂದು ಹೇಳಿದ್ದಾರೆ.
ಭಾರತದ ನೆರೆಹೊರೆಯ, ಮುಸ್ಲಿಂ ಬಾಹುಳ್ಯದ ದೇಶಗಳಾದ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತವನ್ನು ಪ್ರವೇಶಿಸಿದ ಹಿಂದೂ, ಪಾರ್ಸಿ, ಸಿಖ್, ಜೈನ, ಬೌದ್ಧ, ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವ ನೀಡುವ ಉದ್ದೇಶವನ್ನು ಸಿಎಎ ಹೊಂದಿದೆ. ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆಯು ಇನ್ನು ಕೆಲವೇ ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ. ಈ ಹೊತ್ತಿನಲ್ಲಿ ಕೇಂದ್ರವು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ.