ನವದೆಹಲಿ: ಕೇಂದ್ರ ಗೃಹ ಇಲಾಖೆ ಸಿಎಎ ಜಾರಿಗೆ ಅಧಿಸೂಚನೆ ಪ್ರಕಟಿಸಿದ್ದು, ಶಾಹಿನ್ ಬಾಗ್ ನಿವಾಸಿಗಳಲ್ಲಿ ಅತಂಕವನ್ನು ಹೆಚ್ಚಿಸಿದೆ. ತಮ್ಮ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದ್ದು, ಸಿಎಎ ಜಾರಿಯ ಬಗ್ಗೆ ಶಾಹಿನ್ ಭಾಗ್ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
4 ವರ್ಷಗಳ ಹಿಂದೆ ಸರ್ಕಾರ ಸಿಎಎ ಅಂಗೀಕರಿಸಿದ್ದಾಗ ದೆಹಲಿಯ ಶಾಹಿನ್ ಭಾಗ್ ನಲ್ಲಿ ಮಹಿಳೆಯರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಕೋವಿಡ್ ಸೋಂಕು ಎದುರಾಗುವುದಕ್ಕೂ ಮೊದಲು 4 ತಿಂಗಳ ಕಾಲ ಈ ಪ್ರದೇಶದಲ್ಲಿ ಸಿಎಎ ವಿರುದ್ಧ ತೀವ್ರ ಪ್ರತಿಭಟನೆಗಳಾಗಿದ್ದವು. ಸಿಎಎ ಜಾರಿಗೊಳಿಸಲಾಗಿರುವ ಹಿನ್ನೆಲೆಯಲ್ಲಿ ಜೆಎಂಐ ವಿವಿ ಸೇರಿದಂತೆ ಶಾಹಿನ್ ಭಾಗ್ ನ ವಿವಿಧ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸಿಎಎ ಜಾರಿಯಿಂದ ಅಸ್ಥಿರತೆ ತಮ್ಮನ್ನು ಕಾಡುತ್ತಿದೆ ಎಂದು ಈ ಪ್ರದೇಶದ ನಿವಾಸಿಯಾಗಿರುವ ಯೂಸೂಫ್ ಮಾಧ್ಯಮಗಳೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದು ಸರ್ಕಾರ ತಮ್ಮನ್ನು ದೂರ ತಳ್ಳಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ವ್ಯಾಪಾರಿಯಾಗಿರುವ ಅಹ್ಮದ್ ಎಂಬುವವರು ಯೂಸೂಫ್ ಅವರ ಭಾವನೆಗಳನ್ನೇ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದು ಸ್ಥಳೀಯರಲ್ಲಿ ಅಸಹಾಯಕ ಭಾವನೆ ಮೂಡುತ್ತಿದೆ ಎಂದು ಹೇಳಿದ್ದಾರೆ.