ಕಾಸರಗೋಡು: ದೆಹಲಿ ಕೇಂದ್ರೀಕರಿಸಿಉಗ್ರಗಾಮಿ ಸಂಘಟನೆಗಳಿಗೆ ಯುವಕರನ್ನು ರಿಕ್ರೂಟ್‍ಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಹಾಗೂ ಬೇಡಡ್ಕ ಪ್ರದೇಶದ ಎರಡು ನಿವಾಸಗಳಿಗೆ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‍ಐಎ)ತಂಡ ಸೋಮವಾರ ರಾತ್ರಿ ದಾಳಿ ನಡೆಸಿದೆ.
ಮಂಜೇಶ್ವರದ ಕುರುಡಪದವು ನಿವಾಸಿ ಹಾಗೂ ಬೇಡಡ್ಕದ ಪಡಿಪ್ಪು ಎಂಬಲ್ಲಿನ ನಿವಾಸಿಯ ಮನೆಗೆ ದಾಳಿ ನಡೆಸಲಾಗಿದೆ. ಕುರುಡಪದವು ನಿವಾಸಿ, ಕರ್ನಾಟಕದ ಭೂಗತಪಾತಕಿಯೊಬ್ಬನ ತಂಡದ ಜತೆ ಶಾಮೀಲಾಗಿದ್ದು, ಈತನ ವಿರುದ್ಧ ಹಲವು ಕೇಸುಗಳಿರುವುದಾಗಿಯೂ ಮಾಹಿತಿಯಿದೆ. ಎನ್‍ಐಎ ಕೊಚ್ಚಿ ಹಾಗೂ ಬೆಂಗಳೂರು ಘಟಕದ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ನಡೆಸಿದೆ. ದಾಳಿ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಗೊಳಿಸಿಲ್ಲ. ಉಗ್ರಗಾಮಿ ಸಂಘಟನೆಗಳಿಗೆ ಕಾಸರಗೋಡು ಜಿಲ್ಲೆಯಿಂದ ಸದಸ್ಯರನ್ನು ನೇಮಕಾತಿಗೊಳಿಸುವ ದೊಡ್ಡ ಜಾಲ ಕಾರ್ಯಾಚರಿಸುತ್ತಿದ್ದು, ಕುರುಡಪದವು ಹಾಗೂ ಬೇಡಡ್ಕ ನಿವಾಸಿಗಳು ಇದರ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ದಾಳಿ ಆಯೋಜಿಸಲಾಗಿತ್ತು. ಈ ಹಿಂದೆ ಕೇರಳದಿಂದ ಉಗ್ರಗಾಮಿ ಸಂಘಟನೆಗೆ ರಿಕ್ರೂಟ್ ನಡೆಸಲಾಗಿದ್ದ ಯುವಕರು ಕಾಶ್ಮೀರದಲ್ಲಿ ಸೆನೆಯೊಂದಿಗೆ ನಡೆಸಿದ ಸೆಣಸಾಟದಲ್ಲಿ ಮೃತಪಟ್ಟಿದ್ದರು.