ಕಾಸರಗೋಡು: ವಾಹನ ಚಾಲನಾ ತರಬೇತಿ ಶಾಲಾ ವಲಯವನ್ನು ದಮನಿಸುವ ರೀತಿಯಲ್ಲಿ ರಾಜ್ಯ ಸಾರಿಗೆ ಸಚಿವರ ಧೋರಣೆ ಖಂಡಿಸಿ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಮಿತಿ ರಾಜ್ಯಾದ್ಯಂತ ಪ್ರತಿಭಟನೆ ಆಯೋಜಿಸಲಿರುವುದಾಗಿ ಸಂಘಟನೆ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಬಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ವ ಉದ್ಯೋಗ ನಡೆಸುತ್ತಿರುವ ಡ್ರೈವಿಂಗ್ ಸ್ಕೂಲ್ ಕ್ಷೇತ್ರವನ್ನು ಏಕಸ್ವಾಮ್ಯ ಹೊಂದಿರುವ ದೈತ್ಯ ಕಾಪೆರ್Çರೇಟ್‍ಗಳು ಮತ್ತು ನಿವೃತ್ತ ಅಧಿಕಾರಿಶಾಹಿಗಳ ಕೈಗಿತ್ತು ಈ ವಲಯವನ್ನು ದಮನಿಸುವ ಸಾರಿಗೆ ಸಚಿವರ ಇಂತಹ ತಪ್ಪು ನಿರ್ಧಾರವನ್ನು ಸರ್ಕಾರ ಮತ್ತು ಸಾರ್ವಜನಿಕರು ಬೆಂಬಲಿಸಬಾರದು. ಸಾರಿಗೆ ಆಯುಕ್ತರು ಈಗಾಗಲೇ ಹೊರಡಿಸಿರುವ ಸುತ್ತೋಲೆಯಲ್ಲಿನ ಎಲ್ಲಾ ನಿಬಂಧನೆಗಳು ಕೇಂದ್ರ ಮೋಟಾರು ವಾಹನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ
ಇದು ಕೇರಳದ 7,000ಕ್ಕೂ ಹೆಚ್ಚು ಡ್ರೈವಿಂಗ್ ಸ್ಕೂಲ್ ಉದ್ಯಮವನ್ನು ಬಾಧಿಸಲಿರುವುದಲ್ಲದೆ, ಕೇರಳದಲ್ಲಿ ದಶಕಗಳಿಂದ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಡ್ರೈವಿಂಗ್ ಸ್ಕೂಲ್ ವ್ಯವಸ್ಥೆಯನ್ನು ಹಾಳುಗೆಡಹುವ ತಂತ್ರವಾಗಿದೆ.
ಮಾನ್ಯ ಸಾರಿಗೆ ಸಚಿವರು ಈ ವಲಯವನ್ನು ವಾಮ ಮಾರ್ಗದ ಮೂಲಕ ಇನ್ಯಾರದೋ ಕೈಗೊಪ್ಪಿಸಲು ಹೂಡಿರುವ ತಂತ್ರ ಇದಾಗಿದೆ. ಸಚಿವರಿಗೆ ಸಾರಿಗೆ ಇಲಾಖೆಯಿಂದ ಸ್ಪಷ್ಟ ದಾಖಲೆಗಳೊಂದಿಗೆ ಮನವರಿಕೆ ಮಾಡಿದ ನಂತರವೂ ಈ ವಲಯಕ್ಕೆ ಅಡ್ಡಿಪಡಿಸುವುದರ ಹಿಂದೆ ಹಿಡನ್ ಅಜೆಂಡಾ ಹೊಂದಿದೆ. ದುರಾಡಳಿತದಿಂದ ನಲುಗುತ್ತಿರುವ ಕೆಎಸ್‍ಆರ್‍ಟಿಸಿಯಲ್ಲಿ ವೇತನ, ಪಿಂಚಣಿ ನೀಡದೆ ಸಿಬ್ಬಂದಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದರೆ, ನೌಕರರಿಗೆ ವೇತನ, ಪಿಂಚಣಿ ನೀಡುವ ಯೋಜನೆಗೆ ಸಚಿವರು ಮಹತ್ವ ನೀಡುವುದರ ಬದಲು ವಾಹನಚಾಲನಾ ತರಬೇತಿ ಕೇಂದ್ರಗಳನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ. ಸಾರಿಗೆ ಸಚಿವರ ಧೋರಣೆ ಖಮಡಿಸಿ ಮಾ 21ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಮೆರವಣಿಗೆ, ಧರಣಿ ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸಿಎ, ಕೋಶಾಧಿಕಾರಿ ಮನು, ರಾಜ್ಯ ಸಮಿತಿ ಸದಸ್ಯ ಮೋಹನನ್ ಕುತ್ತಿಕ್ಕೋಲ್ ಉಪಸ್ಥಿತರಿದ್ದರು.