ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಮತ ಎಣಿಕೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಎರಡು ರಾಜ್ಯಗಳ ಮತ ಎಣಿಕೆ ಜೂನ್ 4ರ ಬದಲಿಗೆ ಜೂನ್ 2 ರಂದೇ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಲೋಕಸಭೆ ಚುನಾವಣೆಯ ಜೊತೆಗೆ ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 19ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಎರಡೂ ವಿಧಾನಸಭೆಗಳ ಅವಧಿ ಜೂನ್ 2ಕ್ಕೆ ಕೊನೆಗೊಳ್ಳುತ್ತಿರುವುದರಿಂದ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಆದಾಗ್ಯೂ, ಅರುಣಾಚಲ ಮತ್ತು ಸಿಕ್ಕಿಂನ ಲೋಕಸಭಾ ಕ್ಷೇತ್ರಗಳ ವೇಳಾಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ.
ಮಾರ್ಚ್ 27ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಮಾರ್ಚ್ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಮತ್ತು ನಾಮಪತ್ರಗಳನ್ನು ಹಿಂಪಡೆಯಲು ಮಾರ್ಚ್ 30 ಕೊನೆಯ ದಿನಾಂಕವಾಗಿದೆ ಎಂದು ಅರುಣಾಚಲದ ಮುಖ್ಯ ಚುನಾವಣಾಧಿಕಾರಿ ಪವನ್ ಕುಮಾರ್ ಸೇನ್ ತಿಳಿಸಿದ್ದಾರೆ. 2024ರ ಜನವರಿ 5ಕ್ಕೆ ರಾಜ್ಯದಲ್ಲಿ ಒಟ್ಟು 8,82,816 ಮತದಾರರಿದ್ದು, ಇದರಲ್ಲಿ 4,33,760 ಪುರುಷರು ಹಾಗೂ 4,49,050 ಮಹಿಳೆಯರು ಇದ್ದಾರೆ ಎಂದು ಸಿಇಒ ತಿಳಿಸಿದರು. ರಾಜ್ಯದ ಫೋಟೋ ಮತದಾರರ ಪಟ್ಟಿ ಮತ್ತು ಮತದಾರರ ಭಾವಚಿತ್ರದ ಗುರುತಿನ ಚೀಟಿಯ ವ್ಯಾಪ್ತಿ ಶೇ 100 ರಷ್ಟಿದೆ. ರಾಜ್ಯಾದ್ಯಂತ 2,226 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಸಿಇಒ ತಿಳಿಸಿದರು.
ಸಿಕ್ಕಿಂನಲ್ಲಿ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು
ಸಿಕ್ಕಿಂನಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಪ್ರಿಲ್ 19 ರಂದು ಏಕಕಾಲದಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಘೋಷಿಸಿತ್ತು. ಈ ಹಿಮಾಲಯ ರಾಜ್ಯವು ಕೇವಲ ಒಂದು ಲೋಕಸಭಾ ಸ್ಥಾನ ಮತ್ತು 32 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಚುನಾವಣಾ ಆಯೋಗದ ಪ್ರಕಾರ ಮಾರ್ಚ್ 20 ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಂತರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 27 ಕೊನೆಯ ದಿನಾಂಕವಾಗಿದ್ದು, ಮಾರ್ಚ್ 28 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮಾರ್ಚ್ 30 ಕೊನೆಯ ದಿನ ಎಂದು ಆಯೋಗ ತಿಳಿಸಿದೆ. ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) ಚುನಾವಣೆಯಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ಅನ್ನು ಎದುರಿಸಲಿದೆ.