ಜೈಪುರ: ಚುರು ಸಂಸದ ರಾಹುಲ್ ಕಸ್ವನ್ ಅವರು ಸೋಮವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಅವರು, ' ಬಿಜೆಪಿ ನಮ್ಮ ಅಭಿಪ್ರಾಯಗಳನ್ನು ಆಲಿಸುತ್ತಿಲ್ಲ. ನನ್ನ ಇಡೀ ಕುಟುಂಬ ಆ ಪ್ರದೇಶದಲ್ಲಿ ಬಿಜೆಪಿಗಾಗಿ ಪ್ರಾಮಾಣಿಕ ಹಾಗೂ ಅರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿತ್ತು. ಆದರೆ ನನ್ನ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲ ಎಂದು ಅನಿಸಲು ಪ್ರಾರಂಭವಾಯಿತು. ನನ್ನ ರೈತ ಸಹೋದರರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಅಸಾಧ್ಯ ಎನ್ನುವುದು ನನಗೆ ಉಸಿರುಗಟ್ಟಿಸಿದಂತಾಯಿತು' ಎಂದು ರಾಹುಲ್ ಹೇಳಿದ್ದಾರೆ.
ಕಾಂಗ್ರೆಸ್‌ಗೆ ರಾಹುಲ್ ಅವರನ್ನು ಸ್ವಾಗತಿಸಿದ ಖರ್ಗೆ, ಅಧಿಕಾರದ ವಿರುದ್ಧ ಹೋರಾಟ ಮಾಡಿದವರು ನಮ್ಮ ಪಕ್ಷಕ್ಕೆ ಅಗತ್ಯ. ರಾಹುಲ್ ಕಸ್ವನ್ ಅವರನ್ನು ನಾನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇನೆ. ರಾಹುಲ್ ಅವರು, ಫ್ಯೂಡಲ್ ಮನಸ್ಥಿತಿಯವರ ವಿರುದ್ಧ, ರೈತರ ಪರ ಹೋರಾಟ ಮಾಡಿದ್ದಾರೆ' ಎಂದು ಹೇಳಿದ್ದಾರೆ.