ಇಟಾನಗರ್: ಅರುಣಾಚಲ ಪ್ರದೇಶವು ತನ್ನದು ಎಂದು ಹೇಳಿರುವ ಚೀನಾಗೆ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ. ಅರುಣಾಚಲಕ್ಕೂ ಚೀನಾಗೂ ಐತಿಹಾಸಿಕವಾಗಿ ಯಾವುದೇ ಸಂಬಂಧವಿಲ್ಲ. ಅದು ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದಾರೆ.
ಇಟಾನಗರ್: ಅರುಣಾಚಲ ಪ್ರದೇಶವು ತನ್ನದು ಎಂದು ಹೇಳಿರುವ ಚೀನಾಗೆ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ. ಅರುಣಾಚಲಕ್ಕೂ ಚೀನಾಗೂ ಐತಿಹಾಸಿಕವಾಗಿ ಯಾವುದೇ ಸಂಬಂಧವಿಲ್ಲ. ಅದು ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದಾರೆ.
ಚೀನಾ ಸೇನೆಯು ಅರುಣಾಚಲ ಪ್ರದೇಶ 'ಚೀನಾದ ಸ್ವಾಭಾವಿಕ ಭೂಪ್ರದೇಶ' ಎಂದು ಇತ್ತೀಚೆಗೆ ಹೇಳಿತ್ತು.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಐತಿಹಾಸಿಕವಾಗಿ ನಾವು ಚೀನಾದೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ. ಅರುಣಾಚಲ ಪ್ರದೇಶ ಭಾರತದ್ದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ರಾಜ್ಯವನ್ನು ಚೀನಾ ತನ್ನದು ಎಂದು ಹೇಳಿಕೊಳ್ಳುವುದರಿಂದ ವಾಸ್ತವ ಬದಲಾಗದು. ನಮ್ಮ ನಿಲುವು ಸ್ಪಷ್ಟವಾಗಿದೆ. ಅರುಣಾಚಲ ಪ್ರದೇಶ ಭಾರತದ್ದು. ನಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸುವ ಸಾರ್ವಭೌಮ ಹಕ್ಕು ನಮಗಿದೆ. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದಿದ್ದಾರೆ.
ಲೋಕಸಭೆಯಲ್ಲಿ 'ಅರುಣಾಚಲ ಪಶ್ಚಿಮ' ಕ್ಷೇತ್ರವನ್ನು ಪ್ರತಿನಿಧಿಸುವ ರಿಜಿಜು, ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ ನೀಡಿದ್ದನ್ನು ಚೀನಾ ವಿರೋಧಿಸಿರುವುದಕ್ಕೆ ತಿರುಗೇಟು ನೀಡಿದ್ದಾರೆ. ರಾಜ್ಯವು ಭಾರತದ ಅವಿಭಾನ್ಯ ಅಂಗವಾಗಿದೆ. ಇಲ್ಲಿನ ಯಾವುದೇ ಭಾಗಕ್ಕೆ ಪ್ರಧಾನಿ ಮೋದಿ ಮಾತ್ರವಲ್ಲ, ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆ, ದೇಶದ ಯಾವೊಬ್ಬ ನಾಗರಿಕ ಭೇಟಿ ನೀಡಬಹುದು ಎಂದು ಒತ್ತಿ ಹೇಳಿದ್ದಾರೆ.
'ಚೀನಾದ ಹೇಳಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು ಚೀನಾ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆ, ಅರುಣಾಚಲ ಪ್ರದೇಶವು 'ಹಿಂದೆ, ಈಗ ಮತ್ತು ಎಂದೆಂದಿಗೂ ಭಾರತದ್ದು' ಎಂದಿತ್ತು.