ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡುವಾಗ, ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಇಲ್ಲ ಎಂಬ ಷರತ್ತು ವಿಧಿಸುವುದು ಸಲ್ಲದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ರೀತಿಯ ಷರತ್ತು ವಿಧಿಸುವುದು ವ್ಯಕ್ತಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಕೋರ್ಟ್ ಹೇಳಿದೆ.

ಬಿಜೆಪಿ ಮುಖಂಡ ಮತ್ತು ಬರಹಾಂಪುರ ಮುನಿಸಿಪಲ್ ಕಾರ್ಪೊರೇಷನ್‌ನ ಮಾಜಿ ಮೇಯರ್ ಶಿಬ ಶಂಕರ್ ದಾಸ್ ಅಲಿಯಾಸ್ ಪಿಂಟು ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರು ಇದ್ದ ವಿಭಾಗೀಯ ಪೀಠವು ಮಾನ್ಯ ಮಾಡಿದೆ.
ಇಂತಹ ಷರತ್ತು ವಿಧಿಸಿರುವುದನ್ನು ಹಿಂಪಡೆಯಬೇಕು ಎಂಬ ಕೋರಿಕೆಯೊಂದಿಗೆ ದಾಸ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಒರಿಸ್ಸಾ ಹೈಕೋರ್ಟ್ ಜನವರಿಯಲ್ಲಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ದಾಸ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
'ಅರ್ಜಿದಾರರು ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರವಾದ ಪರಿಸ್ಥಿತಿಯನ್ನು ಸೃಷ್ಟಿಸಬಾರದು. ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು' ಎಂದು ಹೈಕೋರ್ಟ್ ಹೇಳಿತ್ತು. ಇದರ ಸಿಂಧುತ್ವವನ್ನು ದಾಸ್ ಅವರು ಪ್ರಶ್ನಿಸಿದ್ದರು.
'ಇಂತಹ ಷರತ್ತನ್ನು ವಿಧಿಸುವುದರಿಂದ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ಇಂತಹ ಷರತ್ತು ವಿಧಿಸಲು ಅವಕಾಶ ಇಲ್ಲ. ಹೀಗಾಗಿ ನಾವು ಹೈಕೋರ್ಟ್ ವಿಧಿಸಿರುವ ಷರತ್ತನ್ನು ರದ್ದುಗೊಳಿಸುತ್ತಿದ್ದೇವೆ' ಎಂದು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಹೇಳಿದೆ.
ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಅರ್ಜಿದಾರರಿಗೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಜಾಮೀನಿನ ಷರತ್ತುಗಳನ್ನು ಬದಲಾಯಿಸುವುದು ಸಮರ್ಥನೀಯ ಆಗುವುದಿಲ್ಲ. ಏಕೆಂದರೆ ಅರ್ಜಿದಾರರ ವಿರುದ್ಧವೇ 57 ಕ್ರಿಮಿನಲ್ ಪ್ರಕರಣಗಳು ಇವೆ ಹಾಗೂ ಅರ್ಜಿದಾರರು 2023ರ ಅಕ್ಟೋಬರ್‌ನಲ್ಲಿ ದಾಳಿಗೆ ತುತ್ತಾಗಿದ್ದರು ಎಂದು ಹೈಕೋರ್ಟ್ ಹೇಳಿತ್ತು.