ನವದೆಹಲಿ: ರಷ್ಯಾ ಅಧ್ಯಕ್ಷರಾಗಿ ಮರು ಆಯ್ಕೆಯಾದ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ದೂರವಾಣಿ ಕರೆ ಮೂಲಕ ಮಾತನಾಡಿರುವ ಅವರು, ಉಕ್ರೇನ್ ಜೊತೆಗಿನ ಸಂಘರ್ಷ ಅಂತ್ಯಕ್ಕೆ ಮಾತುಕತೆ, ರಾಜತಾಂತ್ರಿಕ ಮಾರ್ಗ ಅನುಸರಿಸುವಂತೆ ಪುನರುಚ್ಛರಿಸಿದ್ದಾರೆ.
ನವದೆಹಲಿ: ರಷ್ಯಾ ಅಧ್ಯಕ್ಷರಾಗಿ ಮರು ಆಯ್ಕೆಯಾದ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ದೂರವಾಣಿ ಕರೆ ಮೂಲಕ ಮಾತನಾಡಿರುವ ಅವರು, ಉಕ್ರೇನ್ ಜೊತೆಗಿನ ಸಂಘರ್ಷ ಅಂತ್ಯಕ್ಕೆ ಮಾತುಕತೆ, ರಾಜತಾಂತ್ರಿಕ ಮಾರ್ಗ ಅನುಸರಿಸುವಂತೆ ಪುನರುಚ್ಛರಿಸಿದ್ದಾರೆ.
ಮಾತುಕತೆ ವೇಳೆ, ಇಬ್ಬರೂ ನಾಯಕರು ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚಿಸಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಪರಸ್ಪರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಉಭಯ ದೇಶಗಳ ವಿಶೇಷ ಕಾರ್ಯತಂತ್ರದ ಒಪ್ಪಂದವನ್ನು ಮತ್ತಷ್ಟು ಗಟ್ಟಿಗೊಳಿಸಲೂ ಒಪ್ಪಿಗೆ ಸೂಚಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇವೇಳೆ, ರಷ್ಯಾ ಜನತೆಗೆ ಮೋದಿ, ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ಹಾರೈಸಿದರು ಎಂದೂ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಅವರು ಶೇಕಡ 87.29ರಷ್ಟು ಮತಗಳನ್ನು ಪಡೆದು 5ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಸರಿಸುಮಾರು 7.6 ಕೋಟಿ ಮತದಾರರು ಪುಟಿನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಸಂಘರ್ಷ ತೀವ್ರ
ಇತ್ತ, ಉಕ್ರೇನ್ ಮತ್ತು ರಷ್ಯಾ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಗಡಿ ಪ್ರದೇಶದಲ್ಲಿರುವ ಸುಮಾರು 9 ಸಾವಿರ ಮಕ್ಕಳನ್ನು ಸ್ಥಳಾಂತರಿಸಲು ಯೋಜಿಸಲಾಗಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಷ್ಯಾದೊಳಗಿರುವ ತೈಲ ಸಂಸ್ಕರಣಾಗಾರಗಳು, ಡಿಪೊಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ದಾಳಿಗೆ ಮುಂದಾಗಿದೆ. ರಷ್ಯಾದ ಗಡಿಗಳಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಈ ವಿದ್ಯಮಾನ ಪುಟಿನ್ ಆಡಳಿತದ ಮೇಲೆ ರಾಜಕೀಯ ಒತ್ತಡವನ್ನುಂಟು ಮಾಡಿದೆ.
'ಬೆಲ್ಗೊರೊಡ್ ಪ್ರದೇಶದ ಮೇಲೆ ಉಕ್ರೇನ್ ಮಂಗಳವಾರದಂದು ನಡೆಸಿದ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಇದರಲ್ಲಿ ತಾಯಿ-ಮಗುವಿನ ಪರಿಸ್ಥಿತಿ ಗಂಭೀರವಾಗಿದೆ. ಹಿಂದಿನ ದಿನ ನಿಕೋಲ್ಸ್ಕೋ ಗ್ರಾಮದ ಮೇಲೆ ನಡೆದ ದಾಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ' ಎಂದು ಗ್ಲ್ಯಾಡ್ಕೋವ್ ತಿಳಿಸಿದ್ದಾರೆ.