ಜಗತ್ತು ಬೆಳೆಯುತ್ತಿದ್ದಂತೆ ನಿತ್ಯವು ಒಂದಲ್ಲಾ ಒಂದು ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಕೋವಿಡ್ ಬಳಿಕ ಇಂತಹ ಹೊಸ ರೂಪದ ಕಾಯಿಲೆಗಳು ಹೆಚ್ಚುತ್ತಲೇ ಇವೆ. ಇದೀಗ ಹೊಸದೊಂದು ವೈರಲ್ ಫೀವರ್ ಹುಟ್ಟಿಕೊಂಡಿದೆ. ಹಾಗಾದರೆ ಯಾವುದು ಅದು ಹೊಸ ಕಾಯಿಲೆ? ಏನಿದು ಹೊಸ ಜ್ವರ ಎಂಬುದನ್ನು ನಾವಿಂದು ನೋಡೋಣ.
ನೀವು ಹಂದಿ ಜ್ವರ, ಇಲಿ ಜ್ವರ, ಬಾವಲಿಗಳಿಂದ ಹರಡುವ ಜ್ವರ ಸೇರಿ ಹಲವು ಪ್ರಾಣಿ, ಪಕ್ಷಿಯಿಂದ ಜ್ವರ ಹರಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಈಗ ಹೊಸದಾಗಿ ಗಿಳಿ ಜ್ವರವೊಂದು ಕಾಣಿಸಿಕೊಂಡಿದೆ. ಹೌದು ಗಿಳಿಗಳಿಂದ ಹರಡುವ ಜ್ವರ ಇದಾಗಿದ್ದು, ಜ್ವರದಿಂದ ಜನ ಜೀವ ಕಳೆದುಕೊಂಡಿದ್ದಾರೆ.
ಗಿಳಿಗಳು ನೀಡಲು ಎಷ್ಟು ಸುಂದರವಾಗಿರುತ್ತವೆಯೋ ಈಗ ಅಷ್ಟೇ ಭಯಾನಕವಾಗುತ್ತಿವೆ. ಸದ್ಯ ಈಗ ಗಿಳಿ ಜ್ವರ, ಇದನ್ನು ಸಿಟ್ಟಾಕೋಸಿಸ್ ಎಂದೂ ಕರೆಯುತ್ತಾರೆ, ಇದು ಅಪರೂಪದ ಆದರೆ ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಂನಿಂದ ಉಂಟಾಗುವ ಗಂಭೀರವಾದ ಬ್ಯಾಕ್ಟೀರಿಯಾದ ಸೋಂಕಾಗಿದೆ.
ಈ ವರ್ಷ ಯುರೋಪಿನಾದ್ಯಂತ ಈ ಗಿಳಿ ಜ್ವರಕ್ಕೆ ಐವರು ಬಲಿಯಾಗಿದ್ದಾರೆ. ಕ್ಲಮೈಡೋಫಿಲಾ ಸಿಟ್ಟಾಸಿ (C. psittaci) ಯಿಂದ ಉಂಟಾಗುವ ಪಕ್ಷಿಗಳ ಸೋಂಕು, ತಮ್ಮ ಗರಿಗಳಿಂದ ಅಥವಾ ಒಣ ಮಲದಿಂದ ಹರಡುವ ಸೋಂಕು ಇದಾಗಿದೆ. ಮನುಷ್ಯರು ಉಸಿರಾಡುವಾಗ ಈ ಕಣಗಳು ಗಾಳಿಯಲ್ಲಿ ಸೇರಿ ಸೋಂಕು ಹರಡುತ್ತದೆ.
ಈಗ ಇದೇ ಸೋಂಕಿನಿಂದಾಗಿ ಡೆನ್ಮಾರ್ಕ್‌ನಲ್ಲಿ ನಾಲ್ಕು ಜನರು ಮತ್ತು ನೆದರ್ಲೆಂಡ್ಸ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಹತ್ತಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಿಳಿಯಿಂದ ಸೋಂಕಿತ ಜನರು ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ನೋವು ಸೇರಿದಂತೆ ನ್ಯುಮೋನಿಯಾದಂತಹ ಲಕ್ಷಣಗಳನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಜ್ವರ, ಸ್ನಾಯು ನೋವು, ತಲೆನೋವು ಮತ್ತು ಗ್ಯಾಸ್ಟ್ರೊನೊಮಿಕಲ್ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು.
ಕ್ಲಾಮಿಡಿಯಾ ಸಿಟ್ಟಾಸಿ, ಅಪರೂಪದ ಸಾಂಕ್ರಾಮಿಕ ರೋಗ, ಇದೂ ಗಿಳಿ ಜ್ವರಕ್ಕೆ ಕಾರಣವಾಗಿದೆ, ಇದನ್ನು ಕೆಲವೊಮ್ಮೆ ಸಿಟ್ಟಾಕೋಸಿಸ್ ಎಂದು ಕರೆಯಲಾಗುತ್ತದೆ. ಪಕ್ಷಿಗಳ ಮೂಲಕ ಇದು ಹರಡುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಮತ್ತು ಕೋಳಿಗಳು, ಆದರೆ ರೋಗಪೀಡಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳೊಂದಿಗೆ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಸಹ ಸೋಂಕಿಗೆ ಒಳಗಾಗುತ್ತಾರೆ. ಇದರ ಜೊತೆ ಈ ಕಣಗಳು ಗಾಳಿಯಲ್ಲೂ ಸೇರುತ್ತವೆ ಎಂದು ನೋಯ್ಡಾದ ಮೆಟ್ರೋ ಆಸ್ಪತ್ರೆ ವೈದ್ಯ ಡಾ ಸೈಬಲ್ ಚಕ್ರವರ್ತಿ ಹೇಳಿದ್ದಾರೆ.
ರೋಗಲಕ್ಷಣಗಳು ಏನು?
ಉಸಿರಾಟದ ಸಮಸ್ಯೆ: ಗಿಳಿ ಜ್ವರವು ಸಾಮಾನ್ಯವಾಗಿ ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ನೋವು ಸೇರಿದಂತೆ ನ್ಯುಮೋನಿಯಾವನ್ನು ಹೋಲುವ ರೋಗಲಕ್ಷಣಗಳೊಂದಿಗೆ ಇರುತ್ತದೆ.
ಜ್ವರ ಮತ್ತು ಶೀತ: ರೋಗಿಗಳು ಶೀತ ಮತ್ತು ಬೆವರುವಿಕೆಯೊಂದಿಗೆ ಹೆಚ್ಚಿನ ಜ್ವರವನ್ನು ಅನುಭವಿಸಬಹುದು.
ಸ್ನಾಯು ನೋವು ಮತ್ತು ಆಯಾಸ: ಸಾಮಾನ್ಯ ದೌರ್ಬಲ್ಯ, ಸ್ನಾಯು ನೋವು, ತಲೆ ನೋವು ಮತ್ತು ಆಯಾಸ ಸಾಮಾನ್ಯ ಲಕ್ಷಣಗಳಾಗಿವೆ. ಕೆಲವು ರೋಗಿಗಳು ವಾಕರಿಕೆ, ವಾಂತಿ, ಅತಿಸಾರ ಮತ್ತು ಕಿಬ್ಬೊಟ್ಟೆಯ ನೋವಿನಂತಹ ಜಠರಗರುಳಿನ ರೋಗಲಕ್ಷಣಗಳೂ ಕಂಡುಬರಬಹುದು.
ಈ ಸೋಂಕು ತಡೆಯುವುದು ಹೇಗೆ
ಗಿಳಿಯಿಂದ ಹರಡುವ ಸೋಂಕನ್ನು ತಡೆಯಲು ನೀವು ಮನೆಯಲ್ಲಿ ಗಿಳಿಗಳ ಸಾಕುತ್ತಿದ್ದರೆ ಎಚ್ಚರ ವಹಿಸಿ. ಜೊತೆಗೆ ನೀವೇನಾದರು ಪಾರ್ಕ್‌ಗಳಿಗೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರೆ ಅಲ್ಲಿ ಗಿಳಿಗಳು ಸಹ ಬರುತ್ತವೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸಿ. ಪ್ರಾಣಿ, ಪಕ್ಷಿಗಳ ಸಂಪರ್ಕಕ್ಕೆ ಬಂದರೆ ಕೈಗಳನ್ನು ಚೆನ್ನಾಗಿ ತೊಳೆಯುವುದು ಉತ್ತಮ. ಜೊತೆಗೆ ಜ್ವರ, ಶೀತ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಂಪರ್ಕಿಸುವುದು ಉತ್ತಮ.