ನವದೆಹಲಿ: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ಸಂಬಂಧ ಅಧಿಸೂಚನೆ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹಲವು ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ನವದೆಹಲಿ: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ಸಂಬಂಧ ಅಧಿಸೂಚನೆ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹಲವು ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಈಶಾನ್ಯ ದೆಹಲಿಯ ಶಾಹೀನ್ ಬಾಗ್, ಜಾಮಿಯಾ ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ಗಸ್ತು ತಿರುಗುವ ಮೂಲಕ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಗೆ (ಸಿಎಎ) ಸಂಸತ್ತು 2019ರ ಡಿಸೆಂಬರ್ 11ರಂದು ಅಂಗೀಕಾರ ನೀಡಿತ್ತು. ಅದಕ್ಕೆ ರಾಷ್ಟ್ರಪತಿಯವರು ಮಾರನೆಯ ದಿನವೇ ಅಂಕಿತ ಹಾಕಿದ್ದರು. ಇದು ದೆಹಲಿ ಸೇರಿದಂತೆ ದೇಶದಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಜಾಮಿಯಾ ನಗರ ಮತ್ತು ಶಾಹೀನ್ ಬಾಗ್ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದವು.
2020ರ ಆರಂಭದಲ್ಲಿ ದೆಹಲಿಯ ಈಶಾನ್ಯ ಭಾಗವು ಕೋಮು ಗಲಭೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲಿ 53 ಜನರು ಮೃತಪಟ್ಟರೆ, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ದೆಹಲಿಯ ಸೀಲಂಪುರ್, ಜಾಫ್ರಾಬಾದ್, ಮುಸ್ತಫಾಬಾದ್, ಭಜನ್ಪುರ, ಖಜೂರಿ ಖಾಸ್ ಮತ್ತು ಸೀಮಾಪುರಿ ಸೇರಿದಂತೆ 43 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಆ ಸ್ಥಳಗಳಲ್ಲಿ ಅರೆ ಸೇನಾಪಡೆಯು ಗಸ್ತು ತಿರುಗುತ್ತಿದ್ದು, ಕಾನೂನು ಸುವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಉಪ ಕಮಿಷನರ್ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ.
ಪ್ರಚೋದನಕಾರಿ ಪೋಸ್ಟ್‌ಗಳು ಹಾಗೂ ವದಂತಿಗಳನ್ನು ತಡೆಯಲು ದೆಹಲಿಯ ಸೈಬರ್ ಪೊಲೀಸರು ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಟ್ಟಿದ್ದಾರೆ.