ಪಾಲ್ಗರ್: ನಕಲಿ ಎನ್‌ಕೌಂಟರ್ ಆರೋಪದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀರಾ ಭಯಂದರ್ ವಸೈ ವಿರಾರ್ ಪೊಲೀಸ್ (ಎಂಬಿವಿವಿ) ಸಿಬ್ಬಂದಿ, ಮಂಗೇಶ್ ಚವಾಣ್ ಹಾಗೂ ಮನೋಜ್ ಸಕ್‌ಪಾಲ್ ಎಂಬುವವರನ್ನು ಭಾನುವಾರ ಬಂಧಿಸಲಾಗಿದೆ.
2018ರಲ್ಲಿ ಪಾಲ್ಗರ್ ಜಿಲ್ಲೆಯ ನಾಲಾಸೊಪಾರ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಸಲಾಗಿತ್ತು. ಘಟನೆಯಲ್ಲಿ ಹಲವಾರು ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಜೋಗಿಂದರ್ ರಾಣಾ ಎಂಬಾತ ಸಾವಿಗೀಡಾಗಿದ್ದ.
ನಲಸಪುರ ಕ್ರೈಂ ಬ್ರಾಂಚ್‌ಗೆ ಸೇರಿದ ಮನೋಜ್ ಸಕ್‌ಪಾಲ್ ಹಾಗೂ ಹೆಡ್ ಕಾನ್‌ಸ್ಟೇಬಲ್ ಮಂಗೇಶ್ ಚವಾಣ್ ಅವರು ನಕಲಿ ಎನ್‌ಕೌಂಟರ್ ಮಾಡಿದ್ದಾರೆ ಎಂದು ರಾಣಾ ಸಹೋದರ ಸುರೇಂದ್ರ ಎಂಬುವವರು ದೂರು ಸಲ್ಲಿಸಿದ್ದರು.
ಈ ಸಂಬಂಧ ಎಸ್‌ಐಟಿ ರಚನೆ ಮಾಡಬೇಕೆಂದು ಬಾಂಬೆ ಹೈಕೋರ್ಟ್ ಆದೇಶಿಸಿತ್ತು.
2023ರಲ್ಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಆರೋಪಿತ ಪೊಲೀಸರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮಾ. 11ರವರೆಗೆ ಎಸ್‌ಐಟಿ ಕಸ್ಟಡಿ ವಿಧಿಸಲಾಗಿದೆ.