ತಿರುವನಂತಪುರ: ರಾಜ್ಯದಲ್ಲಿ ಶೀಘ್ರ ಪಡಿತರ ಮಸ್ಟರಿಂಗ್ ನಡೆಸಲಾಗದು. ಸರ್ವರ್ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಿದ ನಂತರ ಮಸ್ಟರಿಂಗ್ ನಡೆಯಲಿದೆ.
ಈ ಮಧ್ಯೆ ಯಾವುದೇ ಅಡಚಣೆ ಇಲ್ಲದೆ ಪಡಿತರ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ. ಸರ್ವರ್ ಸಮಸ್ಯೆಗಳನ್ನು ಪರಿಹರಿಸಿದ ನಂತರ ಪ್ರಾಯೋಗಿಕವಾಗಿ ಮಸ್ಟರಿಂಗ್ ಮಾಡಲು ಯೋಜಿಸಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಮಸ್ಟರಿಂಗ್ ಜತೆಗೆ ಪಡಿತರ ವಿತರಣೆ ಮಾಡಲಾಗುವುದು.
ರಾಜ್ಯದಲ್ಲಿ ಪಡಿತರ ಚೀಟಿ ಮಸ್ಟರಿಂಗ್ ಕಾರ್ಯವನ್ನು ಇದೇ 31ರೊಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಈ ತಿಂಗಳ 15, 16, 17 ರಂದು ರಾಜ್ಯದಲ್ಲಿ ಪಡಿತರ ವಿತರಣೆ ಸ್ಥಗಿತಗೊಳಿಸಿ ಮಸ್ಟರಿಂಗ್ ನಡೆಸಲು ರಾಜ್ಯ ಆಹಾರ ಇಲಾಖೆ ವ್ಯವಸ್ಥೆ ಮಾಡಿತ್ತು. ಆದರೆ ಇ-ಪಿಒಎಸ್ ಯಂತ್ರಗಳಲ್ಲಿ ಸರ್ವರ್ ವೈಫಲ್ಯದಿಂದಾಗಿ ಮಸ್ಟರಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.
ಇ-ಪಿಒಎಸ್ ಯಂತ್ರದಲ್ಲಿನ ದೋಷಗಳನ್ನು ಸರಿಪಡಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೈದರಾಬಾದ್ ಎನ್‍ಐಸಿ ಮತ್ತು ರಾಜ್ಯ ಐಟಿ ಮಿಷನ್ ಸರ್ಕಾರಕ್ಕೆ ತಿಳಿಸಿತ್ತು. ಇದರ ಬೆನ್ನಲ್ಲೇ ಬಿಕ್ಕಟ್ಟು ಸಂಪೂರ್ಣ ಬಗೆಹರಿದ ಬಳಿಕ ಮಸ್ಟರಿಂಗ್ ನಡೆಸಿದರೆ ಸಾಕು ಎಂಬ ನಿರ್ಧಾರಕ್ಕೆ ಬರಲಾಯಿತು.