HEALTH TIPS

ಸಿಎಎ ನಿಯಮ ಜಾರಿಗೆ ತಡೆ ಕೋರಿ ಅರ್ಜಿ: ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

              ವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ನಿಯಮಗಳ ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೂರು ವಾರಗಳಲ್ಲಿ ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.

                 ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿದೆ.

              ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 20 ಅರ್ಜಿಗಳ ಕುರಿತಂತೆ ಪ್ರತಿಕ್ರಿಯಿಸಲು 4 ವಾರಗಳ ಸಮಯಾವಕಾಶ ಕೇಳಿದರು.

               ಪೌರತ್ವ ತಿದ್ದುಪಡಿ ಕಾಯ್ದೆ-2019ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡುವವರೆಗೂ ಕಾಯ್ದೆಯ ನಿಯಮಗಳ ಜಾರಿಗೆ ತಡೆ ನೀಡುವಂತೆ ಈ ಅರ್ಜಿಗಳಲ್ಲಿ ಕೋರಲಾಗಿದೆ.

             'ಸಿಎಎ ಕಾಯ್ದೆಯು ಯಾರೊಬ್ಬರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ'ಎಂದು ಮೆಹ್ತಾ ಪೀಠದ ಗಮನಕ್ಕೆ ತಂದರು.

           ಪೌರತ್ವ ತಿದ್ದುಪಡಿ ಮಸೂದೆಗೆ 2019ರ ಡಿಸೆಂಬರ್‌ 11ರಂದು ಸಂಸತ್ ಅಂಗೀಕಾರ ನೀಡಿತ್ತು. ಮಾರನೆ ದಿನವೇ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಇತ್ತೀಚೆಗೆ ಅದನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು.

              2014ರ ಡಿಸೆಂಬರ್ 31ಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವವನ್ನು ನೀಡಲು ಈ ಕಾಯ್ದೆ ಅನುವು ಮಾಡಿಕೊಟ್ಟಿದೆ.

             'ನಾವು ಯಾವುದೇ ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ... ನಾವು ಅರ್ಜಿದಾರರ ವಾದವನ್ನು ಹಾಗೂ ಇನ್ನೊಂದು ಕಡೆಯವರ ವಾದವನ್ನು ಆಲಿಸಬೇಕಿದೆ' ಎಂದು ಪೀಠವು ಹೇಳಿದೆ. ವಿಚಾರಣೆಯನ್ನು ಏಪ್ರಿಲ್‌ 9ಕ್ಕೆ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರವು ಸಿಎಎ ಜಾರಿಗೆ ಅಗತ್ಯವಿರುವ ನಿಯಮಗಳನ್ನು ಮಾರ್ಚ್ 11ರಂದು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

             ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾಯ್ದೆಯ ಅಡಿಯಲ್ಲಿ ಯಾರಿಗೂ ಪೌರತ್ವ ನೀಡುವುದಿಲ್ಲ ಎಂದು ಕೇಂದ್ರವು ಹೇಳಿಕೆ ನೀಡಬೇಕು ಎಂದು ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಕೋರಿದರು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.

                ಬಲೂಚಿಸ್ತಾನದಲ್ಲಿ ದೌರ್ಜನ್ಯಕ್ಕೆ ಗುರಿಯಾದ ಹಿಂದೂ ಒಬ್ಬ 2014ರ ಡಿಸೆಂಬರ್‌ಗೆ ಮೊದಲು ಭಾರತಕ್ಕೆ ಬಂದಿದ್ದು, ಅವರಿಗೆ ಇಲ್ಲಿನ ಪೌರತ್ವ ನೀಡಿದಲ್ಲಿ ಇತರರ ಹಕ್ಕುಗಳಿಗೆ ಹೇಗೆ ತೊಂದರೆ ಆಗುತ್ತದೆ ಎಂದು ವಕೀಲರೊಬ್ಬರು ಪ್ರಶ್ನಿಸಿದರು. 'ಏಕೆಂದರೆ, ಅವರಿಗೆ ಮತದಾನದ ಹಕ್ಕು ಸಿಗುತ್ತದೆ' ಎಂದು ಇಂದಿರಾ ಅವರು ಪ್ರತ್ಯುತ್ತರ ನೀಡಿದರು.

              ಮಂಗಳವಾರದ ವಿಚಾರಣೆಯ ಕೊನೆಯಲ್ಲಿ ಇಂದಿರಾ ಅವರು, ಈ ಕಾಯ್ದೆಯ ಅಡಿಯಲ್ಲಿ ನೀಡಲಾಗುವ ಪೌರತ್ವವು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗೆ ಬದ್ಧವಾಗಿ ಇರಬೇಕು ಎಂದು ಕೋರ್ಟ್ ಹೇಳಬಹುದು ಎಂದರು. ಹೊಸ ನಿಯಮಗಳ ಅಡಿಯಲ್ಲಿ ಪೌರತ್ವ ನೀಡಲು ಅಗತ್ಯವಿರುವ 'ಮೂಲಸೌಕರ್ಯವನ್ನು ಅವರು ಹೊಂದಿಲ್ಲ' ಎಂದು ಪೀಠವು ಮೌಖಿಕವಾಗಿ ಹೇಳಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries