ಮುಳ್ಳೇರಿಯ: ಅಡೂರು ಗ್ರಾಮ ಕಚೇರಿ ರಜಾ ದಿನಗಳಲ್ಲೂ ಬಾಗಿಲು ತೆರೆದಿರುವುದು ವಿವಾದಕ್ಕೆ ತೆರೆದುಕೊಂಡಿದೆ. ಶನಿವಾರ ಸಂಜೆ ಬಾಗಿಲು ಹಾಕದೆ ನೌಕರರು ತೆರಳಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮ ಕಚೇರಿ ಬಾಗಿಲು ತೆರೆದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ರಸ್ತೆಯ ಪಕ್ಕದಲ್ಲೇ ಗ್ರಾಮ ಕಚೇರಿ ಇದೆ. ಕೆಲವು ಹೊತ್ತು ಕಳೆದರೂ ಯಾರೂ ಸುಳಿಯದೆ ಇದ್ದಾಗ ಬಳಿಕ ನಿವಾಸಿಗಳು ಗಮನಿಸಿದ್ದು, ಒಳಗೆ ಗಮನಿಸಿದಾಗ ಯಾರೂ ಇದ್ದಿರಲಿಲ್ಲ. ಗ್ರಾಮ ಸಹಾಯಕರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದು, 10.30ರ ನಂತರ ನೌಕರರೊಬ್ಬರು ಆಗಮಿಸಿ ಕಚೇರಿಗೆ ಬೀಗ ಹಾಕಿ ತೆರಳಿದರು. ಆದರೆ ಇಲ್ಲಿನ ಗ್ರಾಮಾಧಿಕಾರಿಗೆ ಆದೂರು ಗ್ರಾಮ .ಕಚೇರಿಯ ಪ್ರಭಾರ ಹೊಣೆಯಿದ್ದು ಶನಿವಾರ ಕಚೇರಿಯಿಂದ ಮುಂಚೆಯೇ ತೆರಳಿದ್ದರು. ಭಾನುವಾರ ಕಚೇರಿಗೆ ಸ್ವಚ್ಛತೆಗೆ ಬರುವ ನೌಕರರಿರುವುದರಿಂದ ಬಾಗಿಲು ತೆರೆದು ಹೋಗಿರುವುದಾಗಿ ಗ್ರಾಮಾಧಿಕಾರಿ ತಿಳಿಸಿದ್ದಾರೆ. ಹಲವು ಮಹತ್ವದ ದಾಖಲೆಗಳಿರುವ ಗ್ರಾಮ ಕಚೇರಿ ಬಾಗಿಲಿಗೆ ಬೀಗ ಹಾಕದೆ ಭದ್ರತೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.