ತಿರುವನಂತಪುರ: 'ರಷ್ಯಾದ ಸೇನೆಯಲ್ಲಿರುವ ಭಾರತದ ಯುವಕರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು' ಎಂದು ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
'ಖಾಸಗಿ ಏಜೆನ್ಸಿಗಳಿಂದ ರಷ್ಯಾದ ಸೇನೆಗೆ ನೇಮಕಗೊಂಡಿರುವ ಕೇರಳದ ಮೂವರು ಯುವಕರು ಯುದ್ಧ ನಡೆಯುತ್ತಿರುವ ಜಾಗದಲ್ಲಿ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಮಾನವ ಕಳ್ಳಸಾಗಣೆಯ ಭಾಗವಾಗಿರುವ ನೇಮಕಾತಿ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಬೇಕು' ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕೇರಳದ ಕೆಲ ಖಾಸಗಿ ಏಜೆನ್ಸಿಗಳು ರಷ್ಯಾದಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ಯುವಕರನ್ನು ಪ್ರಚೋದಿಸಿ, ಯುದ್ಧ ಪೀಡಿತ ಉಕ್ರೇನ್‌ಗೆ ಕಳುಹಿಸಲು ಯುವಕರನ್ನು ಸೇನೆಗೆ ನೇಮಿಸಿಕೊಳ್ಳುತ್ತಿರುವುದು ಆಘಾತಕಾರಿ ಬೆಳವಣಿಗೆ. ಯುವಕರ ಕುಟುಂಬದವರ ಪ್ರಕಾರ ನೇಮಕಾತಿ ಸಂಸ್ಥೆಗಳು ₹2.5 ಲಕ್ಷ ಸಂಬಳದ ಭರವಸೆ ನೀಡಿ ಅವರನ್ನು ನೇಮಕ ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ.
ಯುವಕರ ಮೊಬೈಲ್ ಫೋನ್ ಮತ್ತು ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು ಯುದ್ಧಭೂಮಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾಗಾಗಿ ಹೋರಾಡುವಂತೆ ಒತ್ತಾಯಿಸಲಾಗಿದೆ. ಅವರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಯುವಕರ ಸುರಕ್ಷತೆ ಬಗ್ಗೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ರಷ್ಯಾದಲ್ಲಿ ಸಿಲುಕಿರುವ ಭಾರತೀಯ ಯುವಕರ ರಕ್ಷಣೆಗೆ ಭಾರತ ಸರ್ಕಾರ ಕ್ರಮಕೈಗೊಂಡಿದೆ. ಅವರನ್ನು ನೇಮಕಾತಿ ಮಾಡಿಕೊಂಡಿರುವ ಖಾಸಗಿ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ. ಮುರಳೀಧರನ್ ಭಾನುವಾರ ತಿಳಿಸಿದ್ದರು.