ಚೆನ್ನೈ: ತಮಿಳುನಾಡು ಸಚಿವರಾದ ಅನಿತ ರಾಧಾಕೃಷ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿರುವ ಬಿಜೆಪಿಯು, 'ಇಂಡಿಯಾ' ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದೆ. 'ವಿರೋಧ ಪಕ್ಷಗಳ ಮೈತ್ರಿಕೂಟದ ಆತ್ಮಸಾಕ್ಷಿ ಸತ್ತುಹೋಗಿದೆ' ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, ಅನಿತ ರಾಧಾಕೃಷ್ಣನ್ ಅವರ ವಿವಾದಿತ ವಿಡಿಯೊವನ್ನು 'ಎಕ್ಸ್' ವೇದಿಕೆಯಲ್ಲಿ ಹಂಚಿಕೊಂಡು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
'ಡಿಎಂಕೆ ಮುಖಂಡರು ತಮ್ಮ 'ಒರಟು ವರ್ತನೆ'ಯಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದಿದ್ದು, ಅನಿತ ಅವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸುವಂತೆ ಪಕ್ಷವು ಚುನಾವಣಾ ಆಯೋಗಕ್ಕೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಿದೆ' ಎಂದು ಅಣ್ಣಾಮಲೈ ತಿಳಿಸಿದ್ದಾರೆ.
'ಡಿಎಂಕೆ ಸಂಸದೆ ಕೆ.ಕನಿಮೊಳಿ ಮತ್ತು ಇತರರ ಸಮ್ಮುಖದಲ್ಲಿ ರಾಧಾಕೃಷ್ಣನ್ 'ಅಸಹ್ಯಕರ'ವಾಗಿ ಮಾತನಾಡಿದ್ದು, ಅವರೆಲ್ಲ 'ಹೇಸಿಗೆ ಹುಟ್ಟಿಸುವ ಕ್ರಿಯೆ'ಗೆ ಸಾಕ್ಷಿಯಾಗಿದ್ದಾರೆ. ಇದು ರಾಜ್ಯದಲ್ಲಿ ಆಡಳಿತಾರೂಢ ಪಕ್ಷದ ಅಸಭ್ಯ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.