ನಾಗ್ಪುರ: ಲೋಕಸಭಾ ಚುನಾವಣೆಗೂ ಮುನ್ನ ರೈತರ ಚಳವಳಿ ಹೆಸರಿನಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಪ್ರಯತ್ನಗಳು ಪುನರಾರಂಭವಾಗಿದ್ದು, ಪಂಜಾಬಿನಲ್ಲಿ 'ಪ್ರತ್ಯೇಕತಾವಾದಿ ಭಯೋತ್ಪಾದನೆ'ಯು ತನ್ನ ಕೊಳಕು ತಲೆಯನ್ನು ಎತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆರೋಪಿಸಿದೆ.
ನಾಗ್ಪುರದಲ್ಲಿ ಶುಕ್ರವಾರದಿಂದ ಆರಂಭವಾಗಿರುವ 'ಅಖಿಲ ಭಾರತೀಯ ಪ್ರತಿನಿಧಿ ಸಭಾ' ಸಮಾವೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮಂಡಿಸಿದ 2023-24ರ ವಾರ್ಷಿಕ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ.
ಪಶ್ಚಿಮ ಬಂಗಳಾದ ಸಂದೇಶ್‌ಖಾಲಿಯಲ್ಲಿ ನೂರಾರು ತಾಯಂದಿರು ಮತ್ತು ಸಹೋದರಿಯರ ಮೇಲೆ ನಡೆದ ದೌರ್ಜನ್ಯವು ಇಡೀ ಸಮಾಜದ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ ಎಂದೂ ಅದು ತಿಳಿಸಿದೆ.
ದೇಶದ ವಿವಿಧೆಡೆ ನಡೆದ ಘಟನೆಗಳು ಮತ್ತು ಬೆಳವಣಿಗೆಗಳ ಕುರಿತು ವರದಿಯಲ್ಲಿ 'ರಾಷ್ಟ್ರೀಯ ಚಿತ್ರಣ' ಶೀರ್ಷಿಕೆಯಡಿ ಉಲ್ಲೇಖಿಸಲಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಭವ್ಯ ದೇವಾಲಯದಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯ 2024ರಲ್ಲಿ ನಡೆದಿದ್ದು, ಅದು 'ಸುವರ್ಣ ವರ್ಷ' ಎಂದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. 2024ರ ಜನವರಿ 22ರಂದು ವಿಶ್ವದ ಲಕ್ಷಾಂತರ ಹಿಂದೂಗಳ ಕನಸು ಮತ್ತು ಸಂಕಲ್ಪ ಸಾಕಾರವಾಗಿದೆ. ಈ ಮಂದಿರವು ರಾಷ್ಟ್ರೀಯ ಗುರುತಿನ ಸಂಕೇತವೂ ಆಗಿದೆ ಎಂದು ಅದು ಹೇಳಿದೆ.
ಮಣಿಪುರದಲ್ಲಿ ನಡೆದ ಜನಾಂಗೀಯ ಸಂಘರ್ಷದ ಕುರಿತು ಸಂಘ ಕಳವಳ ವ್ಯಕ್ತಪಡಿಸಿದ್ದು, ಸಮಾಜದ ಎರಡು ಸಮುದಾಯಗಳಾದ ಮೈತೇಯಿ ಮತ್ತು ಕುಕಿ ನಡುವಿನ ಅಪನಂಬಿಕೆಯಿಂದ ಹೀಗಾಗಿದೆ ಎಂದಿದೆ. ಹರಿಯಾಣದ ನೂಹ್ ಜಿಲ್ಲೆಯಲ್ಲಿ ವಿಎಚ್‌ಪಿ ಯಾತ್ರೆಯ ಮೇಲೆ ಮುಸ್ಲಿಂ ಸಮುದಾಯದ ಒಂದು ವಿಭಾಗ ದಾಳಿ ನಡೆಸಿ, ಹಿಂಸಾಚಾರವನ್ನು ಪ್ರಚೋದಿಸಿತು. ತಿಂಗಳುಗಟ್ಟಲೆ ಅಲ್ಲಿ ಉದ್ವಿಗ್ನತೆ ಇತ್ತು. ಆದರೆ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ವರದಿಯಲ್ಲಿ ಆರ್‌ಎಸ್‌ಎಸ್ ತಿಳಿಸಿದೆ.
ಭಾರತ, ಹಿಂದುತ್ವ ಅಥವಾ ಸಂಘಕ್ಕೆ ಅವಹೇಳನ ಮಾಡಲು ವಿರೋಧಿ ಶಕ್ತಿಗಳು ಹೊಸ ಯೋಜನೆಗಳ ಹುಡುಕಾಟದಲ್ಲಿ ಸಕ್ರಿಯರಾಗಿದ್ದಾರೆ ಎಂದು ಆರೋಪಿಸಿರುವ ಸಂಘ, 'ದೇಶದ ಎಲ್ಲ ಅನಾಹುತಳಿಗೆ ಸನಾತನ ಧರ್ಮ ಕಾರಣ ಎಂದು ಹೇಳುವುದು, ದಕ್ಷಿಣ ಭಾರತವನ್ನು ಪ್ರತ್ಯೇಕಿಸುವ ಮಾತುಗಳನ್ನಾಡುವುದು, ಜಾತಿ ಗಣತಿಯಂತ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಆಟವಾಡುವುದು-ಇವೆಲ್ಲವೂ ದೇಶದ ಏಕತೆಗೆ ಧಕ್ಕೆ ತರುವ ಪ್ರಯತ್ನಗಳಾಗಿವೆ' ಎಂದು ಹೇಳಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ವಯಂ ಸೇವಕರು ತಮ್ಮ ಹಕ್ಕುಗಳನ್ನು ಚಲಾಯಿಸುವುದರ ಜತೆಗೆ, ಶೇ 100ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದೂ ಅದು ತಿಳಿಸಿದೆ.