ತಿರುವನಂತಪುರಂ: ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ನವದೆಹಲಿಯಿಂದ ತಿರುವನಂತಪುರಕ್ಕೆ ಇಂದು ಆಗಮಿಸಿದ ಪದ್ಮಜಾ ವೇಣುಗೋಪಾಲ್ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಏರ್ಪಡಿಸಿದ್ದರು. ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಕೇಂದ್ರ ಸಚಿವ ವಿ. ಮುರಳೀಧರನ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ರಾಜ್ಯ ಮುಖಂಡರಾದ ಎಸ್. ಸುರೇಶ್, ಪಿ ಸುಧೀರ್, ವಿಟಿ ರಮ, ಶಾನ್ ಜಾರ್ಜ್ ಮತ್ತು ಕರಮನ ಜಯನ್ ಅವರು ಸ್ವಾಗತದ ವೇಳೆ ಉಪಸ್ಥಿತರಿದ್ದರು.
ನಿನ್ನೆ ದೆಹಲಿಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಪ್ರಭಾರಿ ಪ್ರಕಾಶ್ ಜಾವಡೇಕರ್ ಅವರ ನೇತೃತ್ವದಲ್ಲಿ ಪದ್ಮಜಾ ಅವರನ್ನು ಬರಮಾಡಿಕೊಳ್ಳಲಾಯಿತು. ನಿರ್ಲಕ್ಷ್ಯದಿಂದ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ ಎಂದು ಪದ್ಮಜಾ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪದ್ಮಜಾ ಬಿಜೆಪಿ ಸೇರ್ಪಡೆ ಕಾಂಗ್ರೆಸ್‍ಗೆ ನುಂಗಲಾಗದ ತುತ್ತು ಎನ್ನಲಾಗಿದೆ.
ಪದ್ಮಜಾ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯೆ ಮತ್ತು ಮಹಿಳಾ ಕಾಂಗ್ರೆಸ್ ರಾಜ್ಯ ನಾಯಕಿಯಾಗಿ ಸೇವೆ ಸಲ್ಲಿಸಿದವರು. ಪದ್ಮಜಾ ತ್ರಿಶೂರ್‍ನಿಂದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದರು.