ಉಪ್ಪಳ: ಪೈವಳಿಕೆ ಪಂಚಾಯಿತಿ ಎಡರಂಗ ಆಡಳಿತದ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಬಿಜೆಪಿ ಅವಿಶ್ವಾಸ ಗೊತ್ತುವಳಿಗೆ ನೋಟೀಸು ನೀಡಿದೆ. ಸಿಪಿಎಂ ನೇತೃತ್ವದ ಎಡರಂಗ ಆಡಳಿತದ ಏಕಪಕ್ಷೀಯ ತೀರ್ಮಾನ, ಅಭಿವೃದ್ಧಿಕಾರ್ಯಗಳನ್ನು ಸಿಪಿಎಂ ಸದಸ್ಯರಿರುವ ವಾರ್ಡುಗಳಿಗೆ ಸೀಮಿತಗೊಳಿಸಿರುವುದು, ಅಭಿವೃದ್ಧಿ ಕುಂಠಿತ ಸೇರಿದಂತೆ ವಿವಿಧ ಆರೋಪಗಳೊಂದಿಗೆ ಬಿಜೆಪಿ ನೋಟೀಸು ರವಾನಿಸಿದೆ. ಪಂಚಾಯಿತಿ ಆಡಳಿತ ಸಮಿತಿ ವಿರುದ್ಧ ಬಿಜೆಪಿಯ ಎಂಟು ಮಂದಿ ಸದಸ್ಯರು ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿಗೆ ಅವಿಶ್ವಾಸ ಗೊತ್ತುವಳಿ ನೋಟೀಸು ನೀಡಿದ್ದಾರೆ.
ಒಟ್ಟು 19ಮಮದಿ ಸದಸ್ಯಬಲದ ಪಂಚಾಯಿತಿಯಲ್ಲಿ ಬಿಜೆಪಿ ಎಂಟು, ಸಿಪಿಎಂ ಏಳು, ಸಿಪಿಐ ಒಂದು, ಮುಸ್ಲಿಂಲೀಗ್ ಎರಡು, ಕಾಂಗ್ರೆಸ್‍ಗೆ ಒಬ್ಬರು ಸದಸ್ಯರಿದ್ದಾರೆ.
ಈ ಹಿಂದೆ ಚೀಟಿ ಎತ್ತುವ ಮೂಲಕ ಸಿಪಿಎಂನ ಜಯಂತಿ ಅಧ್ಯಕ್ಷೆ ಹಾಗೂ ಬಿಜೆಪಿಯ ಪುಷ್ಪಲಕ್ಷ್ಮೀ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಅವಿಶ್ವಾಸ ಗೊತ್ತುವಳಿಗೆ ಗೆಲುವಾದಲ್ಲಿ ಸಿಪಿಎಂ ನೇತೃತ್ವದ ಎಡರಂಗಕ್ಕೆ ಅಧಿಕಾರ ನಷ್ಟಗೊಳ್ಳಲಿದೆ. ಈ ಮಧ್ಯೆ ಕಾಂಗ್ರೆಸ್ ನೇತೃತ್ವದ ಐಕ್ಯರಂಗದ ನಿಲುವು ನಿರ್ಣಾಯಕವಾಗಲಿದೆ. ಮಾ. 25ರಂದು ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ನಡೆಯಲಿದೆ.