ಬೆಂಗಳೂರು : ಮುದ್ರಣ ಮಾಧ್ಯಮ ಮತ್ತು ಟೆಲಿವಿಷನ್ ಮೀಡಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತೆಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ಪತ್ರಕರ್ತೆಯರ ಸಂಘ ಈ ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಓರ್ವ ಹಿರಿಯ ಹಾಗೂ ಕಿರಿಯ ಪತ್ರಕರ್ತೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯೊಬ್ಬರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಮೊದಲ ಸಾಲಿನ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದೆ.
ಪತ್ರಕರ್ತೆಯರ ಸಂಘವು ಪ್ರಸಕ್ತ ಸಾಲಿನ ವಾರ್ಷಿಕ ಪ್ರಶಸ್ತಿಗೆ ದೂರದರ್ಶನದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತೆ ಗಾಯತ್ರಿ ಚಂದ್ರಶೇಖರ್ ಹಾಗೂ ಕಿರಿಯ ಪತ್ರಕರ್ತೆ ಅನಿತಾ (ಉಪಸಂಪಾದಕಿ, ಪ್ರಜಾವಾಣಿ- ದಾವಣಗೆರೆ ಆವೃತ್ತಿ) ಅವರನ್ನು ಆಯ್ಕೆ ಮಾಡಿದೆ. ಈ ವರ್ಷದ ಮಹಿಳಾ ಸಾಧಕರು, ವಾರ್ಷಿಕ ಪ್ರಶಸ್ತಿಗೆ ಇಸ್ರೋ ಚಂದ್ರಯಾನ-3 ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ ಎಂ.ವಿ. ರೂಪಾ ಅವರನ್ನು ಆಯ್ಕೆ ಮಾಡಿದೆ.
ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಎಪ್ರಿಲ್ 3ರಂದು ನಡೆಯಲಿರುವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಮತ್ತು ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.