ಕಾಸರಗೋಡು: ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಳಿಸಿದಲ್ಲಿ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಯೋಜನೆಗಳನ್ನು ಶೇ. ನೂರರಷ್ಟು ಜಾರಿಗೊಳಿಸಲು ಬದ್ಧತೆ ತೋರಿಸುವುದಾಗಿ ಎನ್‍ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ತಿಳಿಸಿದ್ದಾರೆ. ಅವರು ಕಾಸರಗೋಡು ಪ್ರೆಸ್‍ಕ್ಲಬ್ ಲೋಕಸಭಾ ಅಭ್ಯರ್ಥಿಗಳೊಂದಿಗೆ ಆಯೋಜಿಸುತ್ತಿರುವ ವಿಶೇಷ ಮುಖಾಮುಖಿ ಕಾರ್ಯಕ್ರಮ'ಜನಸಭಾ'ದಲ್ಲಿ ಬುಧವಾರ ಮಾತನಾಡಿದರು.
ಕಾಸರಗೋಡಿನಲ್ಲಿ ಎಡ ಹಾಗೂ ಐಕ್ಯರಂಗಗಳಿಂದ ಅದಲು ಬದಲಾಗಿ ಲೋಕಸಭೆಗೆ ಆಯ್ಕೆಯಾಗಿರುವ ಸದಸ್ಯರು ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎಐಐಎಂಎಸ್ ಮಂಜೂರಾತಿಗೆ ಕೇರಳದ ಹೆಸರನ್ನು ಸೇರ್ಪಡೆಗೊಳಿಸುವಲ್ಲಿ ಇಲ್ಲಿನ ಸಂಸದರು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರತಿಪಕ್ಷಗಳು ತೋರುತ್ತಿರುವ ನಿರ್ಲಕ್ಷ್ಯ, ಜನಪರ ಯೋಜನೆಗಳಿಂದ ಜನರನ್ನು ವಂಚಿತರನ್ನಾಗಿಸುತ್ತಿದೆ. ಪೌರತ್ವ ತಿದ್ದುಪಡಿ ಕಾನೂನು(ಸಿಎಎ) ವಿರುದ್ಧ ಪ್ರತಿಪಕ್ಷಗಳು ಅಲ್ಪಸಂಖ್ಯಾತರ ನಡುವೆ ಭೀತಿ ಹುಟ್ಟಿಸುವ ಕೆಲಸ ನಡೆಸುತ್ತಿದ್ದು, ಇದು ಅವರ ಮತ ಬ್ಯಾಂಕ್ ರಾಜಕೀಯವನ್ನು ಬಿಂಬಿಸುತ್ತದೆ. ಸಿಎಎ ಜಾರಿಯಿಂದ ಭಾರತದ ಅಲ್ಪಸಂಕ್ಯಾತ ಮುಸಲ್ಮಾನರಿಗೆ ಯಾವುದೇ ಸಮಸ್ಯೆ ಎದುರಾಗದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ ಯೋಜನೆಗಳು ತಳಮಟ್ಟದ ಜನತೆಗೆ ಲಭ್ಯವಾಗಿರುವುದರಿಂದ ಜನಸಾಮಾನ್ಯರು ಇಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಪ್ರತಿಪಕ್ಷಗಳು ಸುಳ್ಳು ಪ್ರಚಾರವನ್ನು ಜನತೆ ತಿರಸ್ಕರಿಸಲಿದ್ದಾರೆ. ಪ್ರತಿ ಮನೆಗೆ ಶೌಚಗೃಹ ಯೋಜನೆ, ಬೇಟಿ ಬಚಾವೋ-ಬೇಟಿ ಪಡಾವೋ, ಜನ್‍ಧನ್ ಯೋಜನೆ, ಸುಕನ್ಯ ಸಮೃದ್ಧಿ, ಉಚಿತ ಗ್ಯಾಸ್ ವಿತರಣೆಯ ಉಜ್ವಲ ಯೋಜನೆ, ಸ್ಟಾರ್ಟಪ್, ಜಲಜೀವನ್ ಮಿಷನ್ ಸೇರಿದಂತೆ ನಾನಾ ಯೋಜನೆಗಳಿಂದ ಪ್ರಧಾನಿ ನರೇಂದ್ರ ಮೋದಿ ಇಂದು ಮನೆಮಾತಾಗಿದ್ದಾರೆ. ಕರೊನಾ ಕಾಲಘಟ್ಟದಲ್ಲಿ ನರೇಂದ್ರ ಮೋದಿ ಅವರು ದೇಶವ್ಯಾಪಕವಾಗಿ ಆಹಾರ ವಸ್ತು ಪೂರೈಸುವ ಮೂಲಕ ಮಾದರಿಯಾಗಿದ್ದರೆ, ವಿಶ್ವ ಬೆರಗಾಗುವ ರೀತಿಯಲ್ಲಿ ಅಲ್ಪಾವಧಿಯಲ್ಲಿ ಕೋವಿಡ್‍ಗೆ ಪರಿಣಾಮಕಾರಿ ಲಸಿಕೆ ಕಂಡುಕೊಂಡಿದ್ದಾರೆ. ದೇಶದ ಜನತೆಗೆ ಲಸಿಕೆ ಪೂರೈಸುವುದರ ಜತೆಗೆ ವಿಶ್ವದ ನಾನಾ ರಾಷ್ಟ್ರಗಳಿಗೆ ಪೂರೈಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿಯುವಂತೆ ಮಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ನಿರ್ಣಾಯಕವಾಗಿದ್ದು, ಕಾಸರಗೋಡು ಕೇತ್ರದ ಸಮಗ್ರ ಅಭಿವೃದ್ಧಿಗಾಗಿ ಎನ್‍ಡಿಎ ಅಭ್ಯರ್ಥಿಯನ್ನು ಆಯ್ಕೆಗೊಳಿಸುವಂತೆ ಅವರು ಮನವಿ ಮಾಡಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪದ್ಮೇಶ್ ಕೆ.ವಿ ಸ್ವಾಗತಿಸಿದರು. ಬಿಜೆಪಿ ಮುಖಂಡರಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ ಕೋಳಾರು ಉಪಸ್ಥಿತರಿದ್ದರು.