ನವದೆಹಲಿ: 'ಮಹಿಳೆಯರ ಸುರಕ್ಷತೆಯನ್ನು ಭಾರತ ಗಂಭೀರವಾಗಿ ಪರಿಗಣಿಸಲಿದೆ. ಚಾಲ್ತಿಯಲ್ಲಿರುವ ಕಠಿಣ ಕಾಯ್ದೆಗಳೇ ಇದಕ್ಕೆ ನಿದರ್ಶನ' ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಪ್ರತಿಪಾದಿಸಿದ್ದಾರೆ.
ಸ್ಪೈನ್‌ನ ಮಹಿಳೆ ಮೇಲೆ ಜಾರ್ಖಂಡ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ದೇಶದ ಹೆಸರಿಗೆ 'ಕಳಂಕ' ತರುವ ಯತ್ನ ನಡೆದಿದೆ ಎಂದು ಅಮೆರಿಕದ ಲೇಖಕ ಡೇವಿಡ್ ಜೋಸೆಫ್ ವೊಲೊಡ್ಜ್ಕೊರನ್ನು ಟೀಕಿಸಿದ್ದಾರೆ.
ಜಾರ್ಖಂಡ್‌ನ ಪ್ರಕರಣವನ್ನು ಉಲ್ಲೇಖಿಸಿ, ಭಾರತಕ್ಕೆ ಏಕಾಂಗಿಯಾಗಿ ಪ್ರವಾಸ ತೆರಳಬೇಡಿ ಎಂದು ತನ್ನ ಮಹಿಳಾ ಗೆಳತಿಯರಿಗೆ ಸಲಹೆ ಮಾಡಿ ಡೇವಿಡ್ ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ರೇಖಾ ಶರ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡೇವಿಡ್ ಅವರು, 'ಮಹಿಳೆಯನ್ನು ಸಾರ್ವಜನಿಕವಾಗಿ ಬೆತ್ತಲುಗೊಳಿಸಿದ ಪ್ರಕರಣ ಕುರಿತಂತೆ ಸಲ್ಲಿಸಿದ್ದ ದೂರಿನ ಬಗ್ಗೆ ಕ್ರಮವಹಿಸಿಲ್ಲ ಎಂದ ಸ್ವತಃ ರೇಖಾ ಅವರ ವಿರುದ್ಧವೇ ಸ್ಥಳೀಯ ಮಹಿಳಾ ಪರ ಸಂಘಟನೆಗಳು ಆರೋಪಿಸಿವೆ' ಎಂದು ಉಲ್ಲೇಖಿಸಿದ್ದರು.
ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಕ್ಸಮರ ಮುಂದುವರಿದಿದೆ.
ಇಡೀ ದೇಶವನ್ನು ಅಪಮಾನಗೊಳಿಸಿ ಟ್ವೀಟ್ ಮಾಡುವುದು ಕೆಟ್ಟ ಅಭಿರುಚಿಯುಳ್ಳದ್ದು ಹಾಗೂ ಸ್ವೀಕಾರಾರ್ಹವಲ್ಲ. ಉಲ್ಲೇಖಿತ ಕೃತ್ಯ ಖಂಡನಾರ್ಹವಾಗಿದೆ. ನಿಮಗೆ ಕೆಲ ಅಂಕಿ ಅಂಶಗಳನ್ನು ನೀಡುತ್ತೇನೆ. ದೇಶಕ್ಕೇ ಅನ್ವಯಿಸುವಂತೆ ಮಾಡಿರುವ ಟ್ವೀಟ್ ಅನ್ನು ಅಳಿಸಿಹಾಕಬೇಕು ಎಂದೂ ಮನವಿ ಮಾಡಿದ್ದಾರೆ.
ರೇಖಾ ಶರ್ಮ ಅವರು ಹಂಚಿಕೊಂಡಿರುವ ಅಂಕಿ ಅಂಶದ ಪ್ರಕಾರ, ಭಾರತಕ್ಕೆ ಪ್ರತಿವರ್ಷ ಸುಮಾರು 60 ಲಕ್ಷ ವಿದೇಶಿಯರು ಬರುತ್ತಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು. ಅವರು ಸುರಕ್ಷಿತವಾಗಿಯೇ ಇರುತ್ತಾರೆ. ಲೈಂಗಿಕ ದೌರ್ಜನ್ಯವನ್ನು ಭಾರತ ಗಂಭೀರವಾದ ಅಪರಾಧ ಎಂದು ಪರಿಗಣಿಸಲಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ನಡೆದ ಪ್ರಕರಣವನ್ನು ಮಹಿಳಾ ಆಯೋಗವು ಖಂಡಿಸಲಿದೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಮಹಿಳೆಯ ನೆರವಿಗೆ ಆಯೋಗ ಧಾವಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ, ರಾಜ್ಯಸಭೆಯು ಟಿಎಂಸಿ ಸದಸ್ಯೆ ಸಾಗರಿಕಾ ಘೋಷ್ ಅವರು ರೇಖಾ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಎನ್‌ಸಿಡಬ್ಲ್ಯು ಮುಖ್ಯಸ್ಥೆಯು ಮತ್ತೊಮ್ಮೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮಹಿಳಾ ಸುರಕ್ಷತೆ ಕುರಿತು ಕಾಳಜಿ ಇಲ್ಲದಿರುವುದನ್ನು ತೋರ್ಪಡಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.