ಕಾಸರಗೋಡು: ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾಸಂಘದ ನೇತೃತ್ವದಲ್ಲಿ ಪಿಂಚಣಿದಾರರು ದೆಹಲಿಯಲ್ಲಿ ನಡೆಸಲಿರುವ ಧರಣಿ ಮುಷ್ಕರ ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಸಂಘದ ಕಾಸರಗೋಡು ಜಿಲ್ಲಾ ಘಟಕದ ಸಭೆ ಕಾಸರಗೋಡಿನಲ್ಲಿ ನಡೆಯಿತು.
ಕರೊನಾ ಕಾಲಾಧಿಯಲ್ಲಿ ನಿಲ್ಲಿಸಲಾಗಿದ್ದ ಹಿರಿಯ ನಾಗರಿಕರ ರೈಲ್ವೆ ರಿಯಾಯಿತಿ ಪುನರಾರಂಭಿಸಬೇಕು, ಪಿಂಚಣಿಯಿಂದ ಲಭಿಸುವ ಮೊತ್ತದಿಂದ ಆದಾಯ ತೆರಿಗೆ ವಸೂಲಿ ಕೊನೆಗೊಳಿಸಬೇಕು, ಕೇಂದ್ರನೀಡುವ ತುಟ್ಟಿಭತ್ಯೆ ಸಮಾನ ರೀತಿಯಲ್ಲಿ ರಾಜ್ಯ ಸರ್ಕಾರವೂ ಭತ್ಯೆ ನೀಡಬೇಕು, ಪಿಂಚಣಿದಾರರಿಗೆ ಚಿಕಿತ್ಸಾ ಧನಸಹಾಯ ನೀಡಬೇಕು ಮುಂತಾದ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಮಾರ್ಚ್ 20ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾಸಂಘದ ನೇತೃತ್ವದಲ್ಲಿ ಪಿಂಚಣಿದಾರರು ನಡೆಸಲಿರುವ ಧರಣಿ ಮುಷ್ಕರ ವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಸಕ್ತ ಧರಣಿಯಲ್ಲಿ ಕಾಸರಗೋಡು ಜಿಲ್ಲೆಯಿಂದ 25 ಜನರು ಭಾಗವಹಿಸುವುದಾಗಿಯೂ ತೀರ್ಮಾನಿಸಲಾಯಿತು. ಸಂಘಟನೆ ದೇಶೀಯ ಅಧ್ಯಕ್ಷ ಸಿ. ಎಚ್. ಸುರೇಶ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ದೇಶೀಯ ಸಮಿತಿ ಕೋಶಾಧಿಕಾರಿ ಕೆ.ದಯಾನಂದ, ಉಪಾಧ್ಯಕ್ಷೆ ಉಮಾದೇವಿ, ಜಿ. ದಿವಾಕರನ್, ಇ. ಕೆ. ರವೀಂದ್ರನ್ ನಾಯರ್, ಮುರಲೀಧರನ್, ಚಂದ್ರು, ಸದಾನಂದ ಮಾಸ್ಟರ್, ರಾಮಚಂದ್ರ ಮಾಸ್ಟರ್, ಬೇಬಿ ಉಪಸ್ಥಿತರಿದ್ದರು. ಸಿ. ಎಚ್. ಜಯೇಂದ್ರ ಸ್ವಾಗತಿಸಿದರು. ಮಾಧವನ್ ನಾಯರ್ ವಂದಿಸಿದರು.